ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮಕ್ಕಳ ರಕ್ಷಣೆಯಲ್ಲಿ ಪ್ರತಿ ಇಲಾಖೆಗಳ ಪಾತ್ರವಿದ್ದು, ಎಲ್ಲ ಅಧಿಕಾರಿಗಳು ಅದನ್ನು ಸಮರ್ಥವಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಫೋಕ್ಸೋ, ಮಕ್ಕಳ ಸಹಾಯವಾಣಿ ಹೀಗೆ ಹಲವಾರು ವಿಷಯಗಳ ಬಗ್ಗೆ ಮಕ್ಕಳಿಗೆ ಪ್ರತಿ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಮುದಾಯಕ್ಕೆ ಮಾಹಿತಿ ನೀಡುವ ಕೆಲಸವಾಗಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಮಕ್ಕಳ ರಕ್ಷಣಾ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯರಾಗುತ್ತಿರುವ ಪ್ರಕರಣ ಹೆಚ್ಚಾಗಿದ್ದು, ಈ ಬಗ್ಗೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಇಂತಹ ಪ್ರಕರಣಗಳು ನಡೆಯದಂತೆ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸಬೇಕು. ಶಾಲೆ ಬಿಟ್ಟ ಮಕ್ಕಳ ಸರ್ವೆ ಮಾಡಿಸಿ ಪುನಃ ಶಾಲೆಗೆ ಸೇರಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದ್ದು, ಪ್ರತಿ ವಾರಕ್ಕೊಂದು ಬಾರಿ ಪೊಲೀಸ್ ಠಾಣೆಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಪ್ರತಿ ಶಾಲೆಗಳಲ್ಲಿ ಸಲಹಾ ಪೆಟ್ಟಿಗಳನ್ನು ಇಡಬೇಕು. ಶಾಲಾ ಆವರಣದಲ್ಲಿ, ಶಾಲೆಗಳ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿದ್ದರೆ ಅವುಗಳನ್ನು ತೆರವು ಗೊಳಿಸುವಂತೆ ಬೆಸ್ಕಾಂ ಇಲಾಖೆಗೆ ಸೂಚಿಸಿದರು.
ಶಾಲೆಗಳಿಗೆ ಹೋಗಿ ಬರುವಾಗ, ಆಟವಾಡುವ ಸಂದರ್ಭದಲ್ಲಿ ಮಕ್ಕಳ ಮೇಲೆ ನಾಯಿ ದಾಳಿಗಳ ಪ್ರಕರಣಗಳು ನಡೆಯುತ್ತಿದ್ದು ಇದಕ್ಕೆ ನಗರಸಭೆ ಮತ್ತು ಪಶು ಇಲಾಖೆ ಅಗತ್ಯ ಕ್ರಮ ವಹಿಸಬೇಕು. ಒಟ್ಟಾರೆ ಪ್ರತಿಯೊಂದು ಇಲಾಖೆಗಳಲ್ಲಿಯೂ ಮಕ್ಕಳ ರಕ್ಷಣೆಯ ಜವಾಬ್ದಾರಿಯಿದ್ದು ಅದನ್ನು ಸಮರ್ಥವಾಗಿ ನಿರ್ವಹಿಸಬೇಕೆಂದರು.
ಸಭೆಗೂ ಮುನ್ನಾ ಕರಡಿ ಮತ್ತು ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಕೆಲ ಶಾಲಾ-ಕಾಲೇಜುಗಳು, ವಸತಿ ನಿಲಯಗಳಿಗೆ ಹಾಗೂ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಳೇಪಾಳ್ಯದ ವಿದ್ಯಾರ್ಥಿನಿ ಚಂದನಾ ಮನೆಗೆ ಭೇಟಿ ನೀಡಿದರು.