ಅಮೆರಿಕ ಮತ್ತು ಇರಾನ್‌ ನಡುವಿನ ಬಹುನಿರೀಕ್ಷಿತ ಸಂಧಾನ ಮಾತುಕತೆ ಸ್ವಿಜರ್ಲೆಂಡ್‌ನ ಬರ್ಗೆನ್‌ಸ್ಟಾಕ್‌ನ ಸ್ವಿಸ್ ಮೌಂಟೇನ್ ರೆಸಾರ್ಟ್‌ನಲ್ಲಿ ಭಾನುವಾರ ಶುಭಾರಂಭ ಕಂಡಿದೆ. ಮಾತುಕತೆಯಲ್ಲಿ ಅಮೆರಿಕದ ನೇತೃತ್ವ ವಹಿಸಿರುವ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌, ‘ಕಳೆದ ಕೆಲವು ಗಂಟೆಗಳಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸಿದ್ದೇವೆ

 ಜೂರಿಚ್

ಅಮೆರಿಕ ಮತ್ತು ಇರಾನ್‌ ನಡುವಿನ ಬಹುನಿರೀಕ್ಷಿತ ಸಂಧಾನ ಮಾತುಕತೆ ಸ್ವಿಜರ್ಲೆಂಡ್‌ನ ಬರ್ಗೆನ್‌ಸ್ಟಾಕ್‌ನ ಸ್ವಿಸ್ ಮೌಂಟೇನ್ ರೆಸಾರ್ಟ್‌ನಲ್ಲಿ ಭಾನುವಾರ ಶುಭಾರಂಭ ಕಂಡಿದೆ. ಮಾತುಕತೆಯಲ್ಲಿ ಅಮೆರಿಕದ ನೇತೃತ್ವ ವಹಿಸಿರುವ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌, ‘ಕಳೆದ ಕೆಲವು ಗಂಟೆಗಳಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸಿದ್ದೇವೆ ಮತ್ತು ಮುಂಬರುವ ಗಂಟೆಗಳಲ್ಲಿ ನಾವು ಹೆಚ್ಚುವರಿ ಪ್ರಗತಿ ಸಾಧಿಸುತ್ತೇವೆ’ ಎಂದಿದ್ದಾರೆ.

ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್‌ ಹಾಗೂ ಇರಾನ್‌ ಸಂಸತ್ತಿನ ಸ್ಪೀಕರ್‌ ಮೊಹಮ್ಮದ್‌ ಬಘೇರ್‌ ಘಾಲಿಬಾಫ್‌ ನೇತೃತ್ವದ ನಿಯೋಗಗಳು ಚರ್ಚೆ ನಡೆಸಿವೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಕತಾರ್‌ನ ಉನ್ನತ ನಾಯಕರು ಸಭೆಯ ಮಧ್ಯಸ್ಥಿಕೆ ವಹಿಸಿದ್ದಾರೆ.

ಮಾತುಕತೆಯ ಉದ್ದೇಶ ? 

ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಸಹಿ ಮಾಡಿದ ತಿಳಿವಳಿಕೆ ಒಪ್ಪಂದವನ್ನು (ಎಂಒಯು) ಜಾರಿಗೊಳಿಸುವುದು ಈ ಮಾತುಕತೆಯ ಉದ್ದೇಶವಾಗಿದೆ. ಈ ಮಾತುಕತೆ 60 ದಿನಗಳ ಅವಧಿ ಹೊಂದಿದೆ. ಇರಾನ್‌ ಅಣ್ವಸ್ತ್ರ ತಯಾರಿ, ಹೋರ್ಮುಜ್‌ ಜಲಸಂಧಿ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳು ಮಾತುಕತೆಯ ಪ್ರಧಾನ ಅಂಶಗಳಾಗಿವೆ.

ಹೋರ್ಮುಜ್ ತೆರೆಯುವುದು, ಇರಾನ್ ಅಣ್ವಸ್ತ್ರ ಸಿದ್ಧತೆ ನಿಲ್ಲಿಸುವುದು, ಲೆಬನಾನ್‌ ಕದನವಿರಾಮ ಸೇರಿದಂತೆ ಕೆಲವು ವಿಷಯಗಳಲ್ಲಿ ಈಗಾಗಲೇ ಒಪ್ಪಂದವಾಗಿದೆ ಎಂದು ವ್ಯಾನ್ಸ್ ಹೇಳಿದ್ದಾರೆ. ಆದರೆ ಇರಾನ್ ಇತ್ತೀಚೆಗೆ ಜಲಸಂಧಿಯನ್ನು ಮತ್ತೆ ಮುಚ್ಚಿದ್ದೇವೆ ಎಂದು ಹೇಳಿದೆ.

ಪ್ರಮುಖ ನಾಯಕರು ಭಾಗಿ:

ಅಮೆರಿಕ ನಿಯೋಗದಲ್ಲಿ ವ್ಯಾನ್ಸ್, ಸಲಹೆಗಾರ ಜರೆಡ್ ಕುಷ್ನರ್ ಹಾಗೂ ವಿಶೇಷ ದೂತ ಸ್ಟೀವ್ ವಿಟ್‌ಕಾಫ್ ಇದ್ದಾರೆ. ಇರಾನ್‌ ವತಿಯಿಂದ ಘಾಲಿಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ರಾಜತಾಂತ್ರಿಕ ಎಸ್ಮಾಯಿಲ್ ಬಘೇಯಿ ಸೇರಿ ಪ್ರಮುಖರು ಭಾಗವಹಿಸಿದ್ದಾರೆ. ಮಧ್ಯಸ್ಥಿಕೆದಾರ ದೇಶಗಳಾದ ಪಾಕ್‌ನಿಂದ ಪ್ರಧಾನಿ ಷರೀಫ್, ಸೇನಾ ಮುಖ್ಯಸ್ಥ ಆಸೀಂ ಮುನೀರ್ ಹಾಗೂ ಕತಾರ್‌ನಿಂದ ಪ್ರಧಾನಿ ಶೇಖ್ ಮೊಹಮ್ಮದ್ ಅಲ್ ಥಾನಿ ಮತ್ತು ಇತರ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.