ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

KannadaprabhaNewsNetwork |  
Published : Jan 24, 2025, 12:45 AM IST
ಸಭೆಯಲ್ಲಿ ಸಂಗಮೇಶ ಬಬಲೇಶ್ವರ ಮಾತನಾಡಿದರು. | Kannada Prabha

ಸಾರಾಂಶ

ಬಾಲ್ಯ ವಿವಾಹ ತಡೆಗಟ್ಟುವ ಜವಾಬ್ದಾರಿಯು ಗ್ರಾಮ ಮಟ್ಟದ ಅಧಿಕಾರಿಗಳಿಂದ ಹಿಡಿದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರೆಗೆ ಇರುತ್ತದೆ

ಗದಗ: ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳ ರಕ್ಷಣೆ ಕಾರ್ಯವು ಕೇವಲ ಒಂದು ಇಲಾಖೆಗೆ ಮಾತ್ರ ಸೀಮಿತವಾಗಿರದೇ ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗೂ ದೇಸಿ ಆಟ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲ್ಯ ವಿವಾಹ ತಡೆಗಟ್ಟುವ ಜವಾಬ್ದಾರಿಯು ಗ್ರಾಮ ಮಟ್ಟದ ಅಧಿಕಾರಿಗಳಿಂದ ಹಿಡಿದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರೆಗೆ ಇರುತ್ತದೆ. ಶಿಕ್ಷಣ ಇಲಾಖೆಯವರು ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ನಿಗಾ ವಹಿಸಬೇಕು. ಈ ಕುರಿತು ಪ್ರತಿ ತಿಂಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು. ಬಾಲ ಮಂದಿರದಲ್ಲಿ ಮೂಲಭೂತ ಸೌಕರ್ಯಗಳು ಇರುವಂತೆ ನೋಡಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಣೆಯಲ್ಲಿ ವಿಳಂಬವಾಗಬಾರದು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಪೊಲೀಸ್‌ ಇಲಾಖೆ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮಕ್ಕಳಿಗೆ ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ದೇಸಿ ಆಟಗಳ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ.ಆದ ಕಾರಣ ಇಂದಿನ ಮಕ್ಕಳಿಗೆ ದೇಸಿ ಆಟ ಆಡಲು ಪ್ರೋತ್ಸಾಹಿಸುವುದು ಮುಖ್ಯವಾಗಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರೊಂದಿಗೆ ಸಮಾಲೋಚಿಸಿ ದೇಸಿ ಆಟಗಳ ಕಾರ್ಯಕ್ರಮ ಗದಗ ಜಿಲ್ಲೆಯಲ್ಲಿ ಸಂಘಟಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಮಕ್ಕಳ ರಕ್ಷಣೆಗೆ ಸಮಾಜದ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ. ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ಆಗುವ ಬದಲಾವಣೆ ಕುರಿತು ತಿಳಿವಳಿಕೆ ನೀಡಬೇಕು. ಈ ಜಿಲ್ಲೆಯಲ್ಲಿ ದೇಸಿ ಆಟಗಳ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ದೇಸಿ ಆಟಗಳಲ್ಲಿ ಮಕ್ಕಳನ್ನು ತೊಡಗಿಸುವಂತೆ ಮಾಡುವುದು ಹಾಗೂ ದೇಸಿ ಆಟಗಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಿಸುವುದು ಮುಖ್ಯವಾಗಿದೆ ಎಂದರು.

ಈ ವೇಳೆ ಜಿಪಂ ಸಿಇಒ ಭರತ್.ಎಸ್.ಮಾತನಾಡಿದರು. ಡಿಎಸ್‌ಪಿ ಇನಾಮದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ, ನಿರೂಪಣಾಧಿಕಾರಿ ರಾಧಾ ಮಣ್ಣೂರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆ ಅಧಿಕಾರಿ ಶರಣು ಗೋಗೇರಿ, ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ ಸೇರಿದಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಬಾಲ ವಿಕಾಸ ಅಕಾಡೆಮಿ ಯೋಜನಾಧಿಕಾರಿ ಭಾರತಿ ಶೆಟ್ಟರ ಸ್ವಾಗತಿಸಿ, ವಂದಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?