- ಸೂಸಲವಾನಿ ಸರ್ಕಾರಿ ಶಾಲೆ ಆವರಣದಲ್ಲಿ ಮಕ್ಕಳೇ ಬೆಳೆದ ಭತ್ತ ಕಟಾವು - ತಾಲೂಕು ಕಸಾಪದಿಂದ ರೈತ ಮಿತ್ರ ಮಕ್ಕಳು ಬಿರುದು, ಅಭಿನಂದನಾ ಪತ್ರ
ಮಕ್ಕಳಿಗೆ ಶಾಲೆ ಒಳಗಿನ ತರಗತಿ ಜೊತೆಗೆ ಅನುಭವಾತ್ಮಕ ಶಿಕ್ಷಣವೂ ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ತಿಳಿಸಿದರು.
ಬುಧವಾರ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೇ ಶಾಲಾ ಆವರಣದಲ್ಲಿ ಬೆಳೆಸಿದ ಸೋನಾ ಮಸೂರಿ ಭತ್ತದ ಗದ್ದೆ ಕಟಾವು, ಕಸಾಪದಿಂದ 29 ಮಕ್ಕಳಿಗೆ ಕನ್ನಡ ಶಾಲೆ ರೈತ ಮಿತ್ರ ಬಿರುದು ಹಾಗೂ ಮಕ್ಕಳಿಗೆ ಅಭಿನಂದನಾ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ಆವರಣದಲ್ಲೇ ಮಕ್ಕಳು, ಪೋಷಕರು ಹಾಗೂ ಎಸ್.ಡಿಎಂಸಿ ಸದಸ್ಯರ ಸಹಕಾರದಿಂದ ಭತ್ತ ಬೆಳೆದಿರುವುದು ಅರ್ಥಪೂರ್ಣ ವಾಗಿದೆ. ಇದರಿಂದ ಮಕ್ಕಳಿಗೆ ಭತ್ತದ ಕೃಷಿ ಬಗ್ಗೆ ಪೂರ್ಣ ಪರಿಚಯವಾಗಲಿದೆ. ಸರ್ಕಾರಿ ಶಾಲೆಗಳು ಗ್ರಾಮದ ಎಲ್ಲರ ಸ್ವತ್ತಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂತಹ ಸಂಭ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ ಕೈ ಜೋಡಿಸಿದ್ದು ಸರ್ಕಾರಿ ಶಾಲೆಗಳಿಗೆ ಮತ್ತಷ್ಟು ಶಕ್ತಿ ಬಂದಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಕಸಾಪ ಜಿಲ್ಲಾ ಸಂಚಾಲಕ ಎಸ್.ಎಸ್.ಸಂತೋಷ್ ಕುಮಾರ್ ಮಾತನಾಡಿ, ಅನ್ನ ಹಾಗೂ ಅಕ್ಷರ ಜೀವನಕ್ಕೆ ಅತಿ ಮುಖ್ಯ. ಕುವೆಂಪು ಬರೆದ ನಾಡಗೀತೆಗೆ 100 ತುಂಬಿದ ಸಂಭ್ರಮವನ್ನು ಕಸಾಪ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಮಕ್ಕಳ ಜೀವನ ಪರಿಪೂರ್ಣವಾಗಬೇಕಾದರೆ ನಾಲ್ಕು ಗೋಡೆಗಳ ಒಳಗಿನ ಶಿಕ್ಷಣದ ಜೊತೆಗೆ ಎಲ್ಲಾ ಕ್ಷೇತ್ರಗಳ ಪರಿಚಯ ಇರಬೇಕು. ಇತ್ತೀಚಿನ ವರ್ಷಗಳಲ್ಲಿ ಭತ್ತದ ಬೆಳೆ ಮರೆಯಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ಸೋನಾ ಮಸೂರಿ ಭತ್ತದ ಬೆಳೆ ಬೆಳೆದಿರುವುದು ಶಿಕ್ಷಕರ, ಮಕ್ಕಳ ಕ್ರಿಯಾಶೀಲತೆಗೆ ಸಾಕ್ಷಿ. ಸರ್ಕಾರಿ ಶಾಲೆಗಳಲ್ಲಿ ನೆಲದ ಮಣ್ಣಿನ ಸೊಗಡಿನ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಎಂದರು.
ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ಸರ್ಕಾರಿ ಶಾಲೆ ಯೊಂದರಲ್ಲಿ ಮಕ್ಕಳೇ ಭತ್ತದ ಬೆಳೆ ಬೆಳೆದು ಇತಿಹಾಸ ಸೃಷ್ಠಿಸಿದ್ದಾರೆ. ಕಸಾಪ ಇದನ್ನು ಗಮನಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ಗದ್ದೆ ಕಟಾ ದಿನವೇ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸೂಸಲವಾನಿ ಶಾಲೆಗೆ ಸರ್ಕಾರದಿಂದ 11 ಲಕ್ಷ ಅನುದಾನ ಬಂದಿದ್ದು ಇದಲ್ಲಿ 6 ಲಕ್ಷ ಸಭಾಂಗಣಕ್ಕೆ, 5 ಲಕ್ಷ ಕೊಠಡಿ ಮೇಲ್ಚಾವಣಿಗೆ ಉಪಯೋಗಿಸಿದ್ದೇವೆ.ಶಾಲಾ ಕೊಠಡಿ ದುರಸ್ಥಿಗೆ ಶಾಸಕರಿಗೆ, ಶಿಕ್ಷಣ ಸಚಿವರಿಗೆ ಮನವಿ ನೀಡಿದ್ದೇವೆ ಎಂದರು.ಅತಿಥಿಯಾಗಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಈ ದೇಶದ ರೈತರು, ಗಡಿ ಕಾಯುವ ಯೋಧರು ದೇಶದ ಆಸ್ತಿ. ಸೂಸಲವಾನಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಭತ್ತ ಬೆಳೆದಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಗುರುತಿಸಿ ಮಕ್ಕಳಿಗೆ ಬಿರುದು ನೀಡಿ ಅಭಿನಂದಿಸಿದೆ. ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ. ಕಸಾಪ ಭಾಷೆಯನ್ನು ಉಳಿಸಿ, ಬೆಳೆಸುತ್ತಿದೆ. ಕಸಾಪದಿಂದ ಸರ್ಕಾರಿ ಶಾಲೆಗಳಲ್ಲೇ ಅತಿ ಹೆಚ್ಚು ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಕಸಾಪದಿಂದ ಶಾಲೆಯ 29 ಮಕ್ಕಳಿಗೆ ಕನ್ನಡ ಶಾಲೆ ರೈತ ಮಿತ್ರ ಮಕ್ಕಳು ಬಿರುದು ನೀಡಿ ಅಭಿನಂದನೆ ಪತ್ರ ನೀಡಿದರು. ಪ್ರಗತಿಪರ ಕೃಷಿಕ ಬಿ.ಶಾಂತಕುಮಾರಿ, ಸುನೀತ ಜೋಶಿ, ಶಾಲಾ ಮುಖ್ಯೋಪಾಧ್ಯಾಯ ಎಸ್.ರಾಜಪ್ಪ, ಬಿ.ಇ.ಒ ಶಬನಾ ಅಂಜುಮ್ ಅವರನ್ನು ಸನ್ಮಾನಿಸಲಾಯಿತು. ಕು.ಸುಜನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರಾವೇ ಮಹಿಳಾ ಘಟಕದಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರಾದ ದ್ರವ್ಯ, ಸಮೃದ್ದಿ, ಪ್ರತೀಕ್ಷಾ ಅವರನ್ನು ಗೌರವಿಸಲಾಯಿತು. ಎಸ್.ರಾಜಪ್ಪ ಸ್ವಾಗತಿಸಿದರು. ಪ್ರಮೀಳ ಕಾರ್ಯಕ್ರಮ ನಿರೂಪಿಸಿದರು.ಪೂರ್ಣೇಶ್ ವಂದಿಸಿದರು.ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿಎಂಸಿ ಅಧ್ಯಕ್ಷ ನಾಗೇಶ್ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಸದಸ್ಯರಾದ ಚಂದ್ರಶೇಖರ್, ಎ.ಬಿ.ಮಂಜುನಾಥ್, ಪೂರ್ಣಿಮಾ ಸಂತೋಷ್, ವಾಣಿ ನರೇಂದ್ರ, ಶೈಲಾ ಮಹೇಶ್, ಅಶ್ವಿನಿ, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಶೋಕ್, ತಾ.ಪ್ರಾ.ಶಾಲಾ .ಶಿ. ಸಂಘದ ಅಧ್ಯಕ್ಷ ನಂಜುಂಡಪ್ಪ,ಪಿ.ಡಿ.ಓ.ವಿಂದ್ಯಾ, ಎಸ್.ಡಿಎಂಸಿ ಉಪಾಧ್ಯಕ್ಷ ದೇವಪ್ಪ, ಕಸಾಪ ಹೋಬಳಿ ಅಧ್ಯಕ್ಷ ಉದಯ ಗಿಲ್ಲಿ, ಮುಖ್ಯೋಪಾಧ್ಯಾಯ ಎಸ್.ರಾಜಪ್ಪ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಅಜ್ಜಪ್ಪ, ತಾ.ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಸಹಾಯಕ ಕೃಷಿ ನಿರ್ದೇಶಕ ಮಹೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಕಾಶ್ ಇದ್ದರು. -- ಬಾಕ್ಸ್ ---
ಸೀನಶೆಟ್ಟರು ನಮ್ಮ ಟೀಚರ್ ಪಾಠವೇ ಸ್ಫೂರ್ತಿ7 ನೇ ತರಗತಿಯಲ್ಲಿ ಬರುವ ಸೀನಶೆಟ್ಟರು ನಮ್ಮ ಟೀಚರ್ ಪಾಠದಲ್ಲಿ ಭತ್ತದ ಗದ್ದೆ, ಸಸಿ ನಾಟೀ ಮಾಡುವುದು, ಸಸಿ ಕೀಳುವ ಬಗ್ಗೆ ವಿವರಣೆ ಇದೆ. ಇದನ್ನೇ ಸ್ಪೂರ್ತಿಯಾಗಿಟ್ಟುಕೊಂಡು 2016 ರಿಂದಲೂ ಸೂಸಲವಾನಿ ಸರ್ಕಾರಿ ಶಾಲೆಯಲ್ಲಿ ಅನುಭವಾತ್ಮಕ ಕಲಿಕೆ ಅಂಗವಾಗಿ ಸ್ವಲ್ಫ ಜಾಗದಲ್ಲಿ ಭತ್ತದ ಬೆಳೆಯಲಾಗುತ್ತಿತ್ತು ಎಂದು ಸೂಸಲವಾನಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಎಸ್.ರಾಜಪ್ಪ ತಿಳಿಸಿದರು.
ಕಳೆದ ವರ್ಷದಿಂದ ಅಂದಾಜು 10 ಗುಂಟೆ ಜಾಗದಲ್ಲಿ ಸೋನಾ ಮಸೂರಿ ಭತ್ತದ ಕೃಷಿ ಪ್ರಾರಂಭಿಸಿ ಅಕ್ಕಿಯನ್ನು ಮಕ್ಕಳ ಊಟಕ್ಕೆ ಬಳಸಲಾಗಿದೆ. ಹುಲ್ಲನ್ನು ಮಾರಿ ಶಾಲೆಗೆ ಕೃಷಿ ಪರಿಕರ ಖರೀದಿಸಲಾಗಿದೆ. ಬತ್ತದ ಬೆಳೆಗೆ ಕೊಟ್ಟಿಗೆ ಗೊಬ್ಬರವನ್ನು ಪೋಷಕರು ನೀಡಿ ಸಹಕಾರ ನೀಡಿದ್ದಾರೆ. ರಾಸಾಯನಿಕ ಗೊಬ್ಬರವನ್ನು ನಾನು ನೀಡಿದ್ದೇನೆ. ನಾಟೀ ಕಾರ್ಯ, ಗದ್ದೆ ಕೊಯ್ಲಿಗೆ ಮಕ್ಕಳೊಂದಿಗೆ ಪೋಷಕರು ಸಹಕಾರ ನೀಡುತ್ತಾರೆ ಎಂದರು.