ರಾಮನಗರ: ಮಕ್ಕಳು ದೇವರ ಸಮಾನರು. ಅವರ ಬೆಳವಣಿಗೆ ಮತ್ತು ಶಿಕ್ಷಣದ ಹೊಣೆಗಾರಿಕೆ ಸಮಾಜ ಹಾಗೂ ಪೋಷಕರ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಎಂ.ಎಚ್. ಅಣ್ಣಯ್ಯನವರ ಹೇಳಿದರು.
ದೇಶದ ಪ್ರತಿಯೊಂದು ಮಗುವಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕಿದೆ. ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದರಿಂದ ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ. 14 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಸೇರಿಸಿ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ, ಅವರಿಗೆ ನೀಡುವ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಮಾರ್ಗದರ್ಶನವೇ ಅವರ ಉತ್ತಮ ಭವಿಷ್ಯ ರೂಪಿಸುತ್ತದೆ.
ಒಂದು ಬಿಳಿ ಹಾಳೆ ಕವಿಯ ಕೈಗೆ ಸಿಕ್ಕರೆ ಕಾವ್ಯವಾಗುತ್ತದೆ. ನ್ಯಾಯಾಧೀಶರ ಕೈಗೆ ಸಿಕ್ಕರೆ ತೀರ್ಪಾಗುತ್ತದೆ. ಶಿಕ್ಷಕರ ಕೈಗೆ ಸಿಕ್ಕರೆ ಪಾಠವಾಗುತ್ತದೆ. ಅದೇ ರೀತಿ ಮಕ್ಕಳ ಕೈಗೆ ಪುಸ್ತಕ ಕೊಟ್ಟರೆ ಅವರು ನಾಳೆಯ ಕವಿ, ಶಿಕ್ಷಕ, ಪೊಲೀಸ್ ಅಧಿಕಾರಿ, ನ್ಯಾಯಾಧೀಶ ಅಥವಾ ಜನಪ್ರತಿನಿಧಿಯಾಗಬಹುದು ಎಂದು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಸವಿತಾ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ದೊಡ್ಡ ಕಳಂಕವಾಗಿದೆ. ಇದರಿಂದ ಹೊರಬರಲು ಶಿಕ್ಷಣವೇ ಮುಖ್ಯವಾಗಿದೆ. ಮಕ್ಕಳು ಓದುವ ವಯಸ್ಸಿನಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಹೋಗಬೇಕು. ಪಟಾಕಿ ತಯಾರಿಕೆ, ರೇಷ್ಮೆದಾರ ತಯಾರಿಕೆ ಸೇರಿದಂತೆ ಇತರೆ ಕಾರ್ಮಿಕ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸುವುದು ತಪ್ಪು, ಶಿಕ್ಷಣವನ್ನು ಪಡೆದರೆ ಬಾಲಕಾರ್ಮಿಕ ಪದ್ಧತಿಯನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಬಿನೋಯ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜಿನಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಕಾವೇರಿ , ಜಿಲ್ಲಾ ಕಾರ್ಮಿಕ ನಿರೀಕ್ಷಕರಾದ ಪ್ರದೀಪ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2026 ಕಾರ್ಯಕ್ರಮವನ್ನು ನ್ಯಾಯಧೀಶರಾದ ಅಣ್ಣಯ್ಯನವರ ಉದ್ಘಾಟಿಸಿದರು.