ಕನ್ನಡಪ್ರಭ ವಾರ್ತೆ ಕನಕಪುರ
ಶ್ರೀ ಸಿದ್ಧಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್ ನ ಚೇರ್ಮನ್ ಡಾ.ಶ್ವೇತಾ ಶಶಿಧರ್ ಮಾತನಾಡಿ, ಟ್ರಸ್ಟ್ ನ ಸಂಸ್ಥಾಪಕ, ನಮ್ಮ ತಂದೆ ಡಾ. ಬಿ. ಶಶಿಧರ್ ರವರ ಮಹದಾಸೆಯಂತೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ದೃಷ್ಟಿಯಿಂದ ಹಾಗೂ ಮಕ್ಕಳು ಪುಸ್ತಕ ಪ್ರೇಮಿಗಳಾಗಬೇಕೆಂದು ಮಕ್ಕಳಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಯಂಗ್ ರೀಡರ್ ಅವಾರ್ಡ್ ಗೆ ಪದ್ಮಶ್ರೀ ವಿಜೇತ ಕನ್ನಡಿಗರು- 2024-25 ಮತ್ತು ಆಪರೇಷನ್ ಸಿಂದೂರ ಎಂಬ ವಿಷಯಗಳ ಬಗ್ಗೆ ಸ್ಪರ್ಧೆಯನ್ನು ಏರ್ಪಡಿಸಿ, 9ನೇ ತರಗತಿಯ ಹರ್ಷಿತಾ ಎನ್. ಮತ್ತು 6ನೇ ತರಗತಿಯ ಕಣ್ಮಯಿ ಶೆಟ್ಟಿ ಪಿ. ರವರನ್ನು ವಿಜೇತರೆಂದು ಆಯ್ಕೆಮಾಡಿ ಉತ್ತಮ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಉತ್ತಮ ಸಾಧಕಿ ಪ್ರಶಸ್ತಿಗೆ ಭಾಜನರಾದ ಸುರಕ್ಷಾ ಸಿ. ರವರನ್ನು ಗುರುತಿಸಿ, ಡಾ.ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ವತಿಯಿಂದ ಇದೇ ವೇಳೆ ಸನ್ಮಾನಿಸಲಾಯಿತು.ಹತ್ತನೇ ತರಗತಿಯ ವಿದ್ಯಾರ್ಥಿ ಇಂದೂಧರ ಎಸ್. ರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಂಶುಪಾಲರು ಮತ್ತು ಶಿಕ್ಷಕರ ವೃಂದ ಸದಾ ಸಹಕರಿಸುತ್ತಾ ಬಂದಿದ್ದಾರೆ ಎಂದರು.
6ನೇ ತರಗತಿ ವಿದ್ಯಾರ್ಥಿ, ಮುಖ್ಯ ಅತಿಥಿ ಕಣ್ಮಯಿ ಶೆಟ್ಟಿ ಪಿ. ಮಾತನಾಡಿ, ನಮ್ಮ ಶಾಲೆಯಲ್ಲಿ ನಡೆಯುವ ಶಾಲಾ ವಾರ್ಷಿಕೋತ್ಸವ ಮತ್ತು ಎಲ್ಲಾ ರಾಷ್ಟ್ರೀಯ ಹಬ್ಬಗಳಿಗೂ ಮಕ್ಕಳನ್ನೇ ಅತಿಥಿಗಳಾಗಿ ಆಯ್ಕೆ ಮಾಡುತ್ತಿರುವುದು ವಿಶಿಷ್ಟವಾಗಿದೆ. ಅಂತರ ಶಾಲಾ ಮಟ್ಟದ ಚೆಸ್, ಗಾಯನ ಸ್ಪರ್ಧೆ, ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವಿಜ್ಞಾನ ವಸ್ತುಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಗಳನ್ನು ಪಡೆಯಲು ನಮ್ಮ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರ ವೃಂದದ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು.
2025ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ರಾಜ್ಯಪುರಸ್ಕಾರ ಪಡೆದ ವಿದ್ಯಾರ್ಥಿನಿಯರನ್ನು ಭಾರತ ಸೇನೆಯ ಪರಮ ವೀರರು ಎಂಬ ಪುಸ್ತಕ ಮತ್ತು ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು. ಪಿ.ಕೆ.ಜಿ ಯಿಂದ 10ನೇ ತರಗತಿವರೆಗಿನ ಮಕ್ಕಳು ಹಿಂದೂಸ್ಥಾನಿ ಗಾಯನ, ಭರತನಾಟ್ಯ, ನಾಟಕ, ಮೈಮ್ ಸೆಮಿಕ್ಲಾಸಿಕ್ ನೃತ್ಯ, ಕಂಸಾಳೆ ಹಾಗೂ ವಿವಿಧ ನೃತ್ಯಗಳ ಮೂಲಕ ಪ್ರೇಕ್ಷಕರ ಮನಸೂರೆಗೊಶಿಸಿದರು.