ಕನ್ನಡಪ್ರಭ ವಾರ್ತೆ ಅರಸೀಕೆರೆ
ದೇಶದ ನಿಜವಾದ ಆಸ್ತಿ ಮಕ್ಕಳು. ವಿದ್ಯಾರ್ಥಿಗಳು ಮುಂದಿನ ಮಾನವ ಸಂಪನ್ಮೂಲ, ಶಿಕ್ಷಕರು ಪೋಷಕರು ಕಾಳಜಿ ವಹಿಸಿ ಎಂದು ಡೀಸಿ ಲತಾ ಕುಮಾರಿ ತಿಳಿಸಿದರು.ಅರಸೀಕೆರೆಯ ಶಾಲೆಯೊಂದಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಡೀಸಿ, ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ ಕುಡಿಯುವ ನೀರು, ಆಟದ ಮೈದಾನ ಇದರೊಂದಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು. ದೇಶದ ನಿಜವಾದ ಆಸ್ತಿ ಮಕ್ಕಳು. ನನಗೆ ಜಿಲ್ಲೆಯಲ್ಲಿರುವ ಎರಡು ಲಕ್ಷ ವಿದ್ಯಾರ್ಥಿಗಳು ನಮ್ಮ ಮಕ್ಕಳೇ. ಶಿಕ್ಷಕರಿಗೂ ಅಷ್ಟೇ ಆಯಾ ಶಾಲಾ ಮಕ್ಕಳೇ ಅವರ ಮಕ್ಕಳು ಎಂದರು. ಪ್ರತಿ ಶುಕ್ರವಾರ ಒಂದು ಗಂಟೆಗಳ ಕಾಲ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಮತ್ತು ಬಾಲ್ಯವಿವಾಹ, ಆರೋಗ್ಯ, ವಿದ್ಯಾರ್ಥಿಗಳ ಗುರಿ ಹೇಗಿರಬೇಕು, ಏನಿರಬೇಕು, ಸೌಲಭ್ಯಗಳನ್ನು ಬಳಸಿಕೊಳ್ಳುವುದು ಹೇಗೆ, ಏತಕ್ಕಾಗಿ ಎಂಬ ಕುರಿತು ಮಾರ್ಗದರ್ಶನವನ್ನ ನೀಡುತ್ತಿರುವ ಬಗ್ಗೆ ಗಮನ ಸೆಳೆದಾಗ, ಯಾವ ಮಕ್ಕಳು ದಡ್ಡರಲ್ಲ ಅವರನ್ನು ಇತರರೊಂದಿಗೆ ಹೋಲಿಕೆ ಮಾಡಬಾರದು. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದರು.ಎಲ್ಲಾ ಮಕ್ಕಳನ್ನು ನಿಮ್ಮ ಮಕ್ಕಳೆಂದು ಭಾವಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸಿ ನೂರಕ್ಕೆ ನೂರು ಫಲಿತಾಂಶ ಕೊಡುವುದಕ್ಕಿಂತಲೂ ಇನ್ನೂ ಹೆಚ್ಚಿನ ಗಮನವನ್ನು ಒಬ್ಬ ವಿದ್ಯಾರ್ಥಿಯು ಅನುತ್ತೀರ್ಣನಾಗಬಾರದು ಎಂಬ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು. ಪೋಷಕರಿಗೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಮನೆಯಲ್ಲಿ ಮಕ್ಕಳ ಎದುರುಗಡೆ ಕೆಟ್ಟ ಪದಗಳನ್ನು ಬಳಸಬಾರದು. ಮನೆಯ ವಾತಾವರಣ ಪ್ರಶಾಂತವಾಗಿ, ಸಂತಸಮಯವಾಗಿ ಇರಬೇಕು, ಟಿವಿ, ಮೊಬೈಲ್ ಮೊದಲಾದವನ್ನು ಪೋಷಕರು ತ್ಯಾಗ ಮಾಡಬೇಕಾಗುತ್ತದೆ. ತಂದೆತಾಯಿಗಳ ಈ ತ್ಯಾಗದಿಂದ ಮಕ್ಕಳು ಒಂದು ಉತ್ತಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಸರಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ನಾನು ಸರಕಾರಿ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಈ ಸ್ಥಾನಕ್ಕೆ ಬಂದಿರುವೆನು, ಎಂಬ ಸಂದೇಶವನ್ನು ಪೋಷಕರಿಗೆ ಜಿಲ್ಲಾಧಿಕಾರಿಗಳು ನೀಡಿದರು.ಇದಕ್ಕೆ ಮುನ್ನ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಪ್ರತಿ ಶುಕ್ರವಾರ ಆನ್ಲೈನ್‌ನಲ್ಲಿ ನಾನು ನೀಡುವ ಮಾರ್ಗದರ್ಶನವನ್ನು ಗಮನಿಸುತ್ತಿದ್ದೀರ? ಎಂಬ ಪ್ರಶ್ನೆಗೆ ಎಲ್ಲಾ ವಿದ್ಯಾರ್ಥಿಗಳು ಹೌದು ಎಂದರೆ ಅವರು ಕೇಳಿದ ಕೆಲ ಪ್ರಶ್ನೆಗಳಿಗೂ ಉತ್ತರಿಸಿದರು. ಆಕಾಶಕ್ಕೆ ಅಂತ್ಯವಿಲ್ಲ ಎಂಬುದು ಎಷ್ಟು ಸತ್ಯವೋ ಹಾಗೆ ಕಲಿಕೆಗೂ ಸಹ ಅಂತ್ಯ ಎಂಬುದು ಇರುವುದಿಲ್ಲ ಆಸಕ್ತಿಯಿಂದ ಶಿಕ್ಷಣದತ್ತ ಗಮನ ಕೊಡಿ ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಿವಿಮಾತು ಹೇಳಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಮಾಧ್ಯಮಕ್ಕೆ ಮಾಹಿತಿ ನೀಡಿ ಜಿಲ್ಲೆಯ 241 ಸರಕಾರಿ ಪ್ರೌಢ ಶಾಲೆಗಳು ಸೇರಿದಂತೆ 536 ಪ್ರೌಢಶಾಲೆಗಳಲ್ಲಿನ 63,000 ಶಾಲಾ ವಿದ್ಯಾರ್ಥಿಗಳು ಪ್ರತಿ ಶುಕ್ರವಾರ ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಆನ್ಲೈನ್ ಮಾರ್ಗದರ್ಶನ ಪಡೆಯುತ್ತಿದ್ದಾರೆ,ಇದು ನಮ್ಮ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿದೆ ಆಸಕ್ತಿಯಿಂದ ಆನ್ಲೈನ್ ಕ್ಲಾಸಲ್ಲಿ ತೊಡಗುತ್ತಿದ್ದಾರೆ. ವಿದ್ಯಾರ್ಥಿಗಳು ಏನೇನು ಎಚ್ಚರ ವಹಿಸಬೇಕು ಎಂಬ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿಕೊಡುತ್ತಿದ್ದಾರೆ. ನಿಜಕ್ಕೂ ಇದು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಒಂದು ಗಿಫ್ಟ್ ಆಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಸಮನ್ವಯ ಅಧಿಕಾರಿ ಶಂಕರ್, ಹಾಸನ ಡಯಟ್ ಹಿರಿಯ ಉಪನ್ಯಾಸಕಿ ಮಲ್ಲಮ್ಮ, ಸರಕಾರಿ ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಇತರರು ಇದ್ದರು.