ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ

KannadaprabhaNewsNetwork |  
Published : Jun 03, 2024, 12:30 AM IST
ಪೋಟೊ-೨ಎಸ್.ಎಚ್.ಟಿ. ೨ಕೆ-ಭಾನುವಾರ ಪಟ್ಟಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ನಿರ್ದೇಶನದಂತೆ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಗುರುತಿಸಿ ಮಕ್ಕಳು ಹಾಗೂ ಪಾಲಕರ, ಪೋಷಕರ ಸಭೆ ನಡೆಸಿ ತಿಳುವಳಿಕೆ ಮೂಡಿಸಲಾಯಿತು. | Kannada Prabha

ಸಾರಾಂಶ

ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸಾರ್ವಜನಿಕರು,ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯ

ಶಿರಹಟ್ಟಿ: ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ ಅವರನ್ನು ಗುರುತಿಸಿ ಶಾಲೆಗೆ ದಾಖಲಿಸಬೇಕು. ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ನೇಮಿಸಿಕೊಳ್ಳುವುದು ಕಾನೂನು ಬಾಹಿರವಾಗಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇದನ್ನು ಅಂಗಡಿ ಮಾಲೀಕರು ಗಮನದಲ್ಲಿಟ್ಟುಕೊಳ್ಳಬೇಕು.ಪಾಲಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅನ್ನಪೂರ್ಣ ಗಾಣಿಗೇರ ಪಾಲಕರಿಗೆ ತಿಳಿವಳಿಕೆ ನೀಡಿದರು.

ಭಾನುವಾರ ಪಟ್ಟಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ನಿರ್ದೇಶನದಂತೆ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಶಿರಹಟ್ಟಿ ಸಹಯೋಗದಲ್ಲಿ ಮಾರುಕಟ್ಟೆಯಲ್ಲಿ ಗ್ಯಾರೇಜ್, ಹೋಟೆಲ್, ಮಧ್ಯದಂಗಡಿ, ಎಗ್ಗ್ ರೈಸ್ ಸೆಂಟರ್, ಜ್ಯುವೇಲರಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ೧೮ ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಕಾರ್ಯಾಚರಣೆ ಮಾಡಿ ೨೦ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ ನಂತರ ಕೆಜಿಎಸ್ ಶಾಲೆಯಲ್ಲಿ ಪಾಲಕರ ಸಭೆ ನಡೆಸಿ ತಿಳಿವಳಿಗೆ ನೀಡಿ ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸಾರ್ವಜನಿಕರು,ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ. ೧೮ ವರ್ಷದ ಒಳಗಿನ ಮಕ್ಕಳೆಲ್ಲರು ಮುಖ್ಯವಾಹಿನಿಯಲ್ಲಿರುವಂತೆ ನೋಡಿಕೊಳ್ಳಲು ಪೋಷಕರಿಗೆ ತಿಳಿವಳಿಕೆ ಹೇಳಿದರು. ಮಕ್ಕಳು ಶಾಲಾ ಅವಧಿಯಲ್ಲಿ ಶಾಲೆಯಿಂದ ಹೊರಗುಳಿದರೆ, ಯಾವುದೇ ಕೆಲಸ ಮಾಡುತ್ತಿದ್ದರೆ ಅದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬುದನ್ನು ಮನವರಿಕೆ ಮಾಡಿದರು.

ಬಾಲ್ಯವೆಂದರೆ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸುವ ವಯಸ್ಸು. ಜಗತ್ತು ಏನೆಂಬುದನ್ನು ಅರ್ಥಮಾಡಿಕೊಳ್ಳಲಾಗದ ಆ ದಿನಗಳು ಎಲ್ಲರಿಗೂ ಸುಂದರವೇ. ಆದರೆ ಮಕ್ಕಳನ್ನು ದೇವರಂತೆ ಪೂಜಿಸುವ ವಯಸ್ಸಿನಲ್ಲಿ ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಮೆಗೆ ತಳ್ಳುವುದು ಅಪರಾಧವಾಗಿದೆ ಎಂದರು.

ಮನೆಯಲ್ಲಿ ಆಡಿಕೊಂಡು ಶಿಕ್ಷಣ ಆರಂಭ ಮಾಡುವ ಬದಲು ಗಾರ್ಮೆಂಟ್ಸ್‌ಗಳಲ್ಲಿ, ಕಟ್ಟಡಗಳ ಕೆಲಸಗಳಲ್ಲಿ, ಗ್ಯಾರೇಜ್, ಹೋಟೆಲ್, ಕಾರ್ಖಾನೆಗಳಲ್ಲಿ, ಬೇಕರಿ, ದೊಡ್ಡ ದೊಡ್ಡ ಮನೆಗಳಲ್ಲಿ ಕೆಲಸದಾಳುಗಳಾಗಿ ಕಷ್ಟವಾಗುವಂತೆ ಕೆಲಸಗಳನ್ನು ಮಾಡುತ್ತಿರುವುದನ್ನು ಪೋಷಕರು ಬಿಡಿಸಬೇಕು. ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಎಷ್ಟೋ ಜನ ಬಾಲಕಾರ್ಮಿಕ ಮಕ್ಕಳು ತಮ್ಮ ಶಿಕ್ಷಣದ ಹಕ್ಕು, ಆರೋಗ್ಯ ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿ ಕೆಲಸದಲ್ಲಿ ತೊಡಗಿಕೊಂಡಿರುವುದು ಗಮನಕ್ಕಿದೆ. ಈ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಅಪಾಯಕಾರಿ ಪರಿಸರದಲ್ಲಿ ಕೆಲಸ, ಗುಲಾಮಗಿರಿ ಅಥವಾ ಬಲವಂತವಾಗಿ ಕೆಲಸ ಮಾಡುತ್ತಾರೆ.

ಮಕ್ಕಳ ರಕ್ಷಣಾ ಅಧಿಕಾರಿಗಳಾದ ರಮೇಶ್ ಕಳ್ಳಿಮಿನಿ, ಮಲ್ಲಪ್ಪ ಫ ಹೊಸಳ್ಳಿ, ಸವಿತಾ ಹತಿ೯, ಪರಿವಿಕ್ಷಣಾಧಿಕಾರಿ ಶಶಿಕಲಾ ಕವಲೂರು, ಡಿ.ಐ. ಈರಗಾರ, ಕಾರ್ಮಿಕ ನಿರೀಕ್ಷಕ ಉಮೇಶ್ ಹುಲ್ಲಣ್ಣವರ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಅಲ್ತಾಫ್ ಹಾಗೂ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ