ಕನ್ನಡಪ್ರಭ ವಾರ್ತೆ ಸಿಂಧನೂರು
ನಾವೆಲ್ಲ ಅಂಬೇಡ್ಕರ್ ಮಕ್ಕಳು. ಮದ್ಯ ಸೇವನೆ, ಧೂಮಪಾನ, ಮಾದಕ ವಸ್ತುಗಳ ಸೇವನೆ ಹಾಗೂ ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಅಂಬೇಡ್ಕರ್ ಮಕ್ಕಳಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹೇಳಿದರು.ಅವರು ಟೌನ್ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಿಂಧನೂರು ಮತ್ತು ತುರ್ವಿಹಾಳ ಹಾಗೂ ಸಿಂಧನೂರು ತಾಲೂಕು ಇಂದಿರಾಗಾಂಧಿ ಸ್ತ್ರೀಶಕ್ತಿ ಒಕ್ಕೂಟ ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ಸಿಂಧೋಳ್ ಸಮುದಾಯದ ಅಲೆಮಾರಿ ಮತ್ತು ಮಾಜಿ ದೇವದಾಸಿ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಜಯಂತಿಯಂದು ಮದ್ಯ ಸೇವನೆ ಮಾಡಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿದರೆ ಅಂಬೇಡ್ಕರ್ ಮಕ್ಕಳಾಗಲು ಸಾಧ್ಯವಿಲ್ಲೋ ಅಣ್ಣ. ಅಂಬೇಡ್ಕರ್ ನಡೆದು ಬಂದ ದಾರಿಯಲ್ಲಿ ನಡೆದು, ಅವರ ಆಶಯಗಳನ್ನು ಸಾಕಾರಗೊಳಿಸಿದಾಗ ಅವರ ಮಕ್ಕಳಾಗಲು, ಅನುಯಾಯಿಗಳಾಗಲು ನಾವು ಅರ್ಹರು ಎಂಬುದನ್ನು ಪ್ರತಿಯೊಬ್ಬರೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಭಾವುಕರಾಗಿ ನುಡಿದರು.ನನ್ನಪ್ಪ ಕಷ್ಟಪಟ್ಟು ಓದಿಸಿದ್ದಕ್ಕಾಗಿಯೇ ನಾನು ಇಂದು ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದೇನೆ. ನನ್ನ ಸ್ಥಾನದಲ್ಲಿ ಅಲೆಮಾರಿ ಸಮುದಾಯಗಳ ಮಕ್ಕಳು ನಿಲ್ಲಬೇಕೆನ್ನುವುದು ನನ್ನ ಕನಸು. ಹೀಗಾಗಿ ಶೋಷಿತ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ಸಂವಾದದಲ್ಲಿ ಸಿಂಧನೂರ ನಗರ ಸೇರಿದಂತೆ ಸುತ್ತಲಿನ ಹೊಸಳ್ಳಿ, ಅಮರಾಪುರ, ಸಾಸಲಮರಿ, ಏಳುರಾಗಿ ಕ್ಯಾಂಪ್, ಜಾಲಿಹಾಳ, ಕಲ್ಲೂರು, ಮುಳ್ಳೂರು ಸೇರಿದಂತೆ ಬೇರೆ ಬೇರೆ ಗ್ರಾಮ, ಕ್ಯಾಂಪ್‌ಗಳ ಮಹಿಳೆಯರು, ಮಾಜಿ ದೇವದಾಸಿ ಮಹಿಳೆಯರು ಭಾಗಿಯಾಗಿದ್ದರು.ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು, ವಿವಿಧ ಸಮಾಜದ ಪ್ರಮುಖರು ಹಾಜರಿದ್ದರು.
ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಸೂಚನೆತಾಲೂಕು ವ್ಯಾಪ್ತಿಯ ಎಲ್ಲ ಕ್ಯಾಂಪ್ಗಳು ಮತ್ತು ಹಳ್ಳಿಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ ಸೇರಿದಂತೆ ಎಲ್ಲ ಮಹಿಳೆಯರು ಹಾಗೂ ಮಾಜಿ ದೇವದಾಸಿ ಮಹಿಳೆಯರನ್ನು ಸೇರಿಸಿ ಮಹಿಳಾ ಗ್ರಾಮ ಸಭೆಗಳನ್ನು ನಡೆಸಬೇಕು. ಆ ಸಭೆಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕ್ರಮಗಳ ಜರುಗಿಸಿದ ಬಗ್ಗೆ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೆ ಸೂಚನೆ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಬಹುವರ್ಷಗಳಿಂದ ನಮಗೆ ಮನೆ ಇಲ್ಲ. ನಿವೇಶನ ಇಲ್ಲ ಎಂದು ಅನೇಕ ಮಾಜಿ ದೇವದಾಸಿ ಮಹಿಳೆಯರು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಈ ವೇಳೆ ಅಧ್ಯಕ್ಷರು ವೇದಿಕೆಗೆ ನಗರಸಭೆ ಆಯುಕ್ತರನ್ನು ಕರೆದು ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕು ಎಂದರು.