ಗುಜರಾತ್ನಲ್ಲಿ ನಡೆದ ರಾಷ್ಟ್ರಮಟ್ಟದ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳಾಗಿ ಶಿವಮೊಗ್ಗ ಜಿಲ್ಲೆಯ ಪಟ್ಲ ಫೌಂಡೇಶನ್ನ ಮತ್ತು ಸಾಗರ್ ಯೂಥ್ ಫೋರ್ಸ್ ಅಸೋಸಿಯೇಷನ್ನ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡುವ ಮೂಲಕ ನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗುಜರಾತ್ನಲ್ಲಿ ನಡೆದ ರಾಷ್ಟ್ರಮಟ್ಟದ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳಾಗಿ ಶಿವಮೊಗ್ಗ ಜಿಲ್ಲೆಯ ಪಟ್ಲ ಫೌಂಡೇಶನ್ನ ಮತ್ತು ಸಾಗರ್ ಯೂಥ್ ಫೋರ್ಸ್ ಅಸೋಸಿಯೇಷನ್ನ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡುವ ಮೂಲಕ ನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.
ಕರ್ನಾಟಕದ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನ ಕಲೆಯನ್ನು ದೇಶದ ವಿವಿಧ ರಾಜ್ಯಗಳ ಗಣ್ಯರು ಹಾಗೂ ಅತಿಥಿಗಳ ಸಮ್ಮುಖದಲ್ಲಿ ಪ್ರದರ್ಶಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ವಿಶೇಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶನಗೊಂಡಿರುವುದು ಕಲೆಯ ಮಹತ್ವ ಮತ್ತು ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.
ಶಿವಮೊಗ್ಗ ಜಿಲ್ಲೆಯ ಪಟ್ಲ ಫೌಂಡೇಶನ್ ವಿದ್ಯಾರ್ಥಿಗಳು ಹಾಗೂ ಸಾಗರ್ ಯೂಥ್ ಫೋರ್ಸ್ ಅಸೋಸಿಯೇಷನ್ ಸಂಸ್ಥೆಯ ಸಹಭಾಗಿತ್ವದಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಕ್ಷಗಾನದ ವೇಷಭೂಷಣ, ನೃತ್ಯ, ಅಭಿನಯ, ಚಂಡೆ-ಮದ್ದಳೆಗಳ ನಾದದೊಂದಿಗೆ ಮನಮೋಹಕ ಪ್ರದರ್ಶನ ನೀಡಿದ್ದಾರೆ. ಮಲೆನಾಡಿನ ನೆಲದಲ್ಲಿ ಯಕ್ಷಗಾನ ಕಲಿತು ಬೆಳೆದ ವಿದ್ಯಾರ್ಥಿಗಳು ಗುಜರಾತ್ನಂತಹ ದೂರದ ರಾಜ್ಯದಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿರುವುದು ವಿಶೇಷ ಗಮನ ಸೆಳೆದಿದೆ.
ಯಕ್ಷಗಾನದ ವೈಭವವನ್ನು ಮೆಚ್ಚಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ಯಕ್ಷಗಾನದ ಚಿತ್ರವನ್ನು ಹಂಚಿಕೊಂಡಿರುವುದು ಕಲಾವಿದರಿಗೆ ಮತ್ತಷ್ಟು ಉತ್ಸಾಹ ತುಂಬಿದೆ. ಪ್ರಧಾನಮಂತ್ರಿಗಳ ಮಟ್ಟದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಗೆ ದೊರೆತ ಈ ಮನ್ನಣೆ ಯಕ್ಷಗಾನ ಕಲೆಯ ರಾಷ್ಟ್ರೀಯ ಪ್ರಸಿದ್ಧಿಗೆ ಹೊಸ ಮೆರುಗು ನೀಡಿದೆ. ಮಲೆನಾಡಿನ ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಕಲಾಸಕ್ತಿಗೆ ದೊರೆತ ದೊಡ್ಡ ಗೌರವ ಇದಾಗಿದೆ.
ಈ ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸಾಗರ್ ಯೂಥ್ ಫೋರ್ಸ್ ಅಸೋಸಿಯೇಷನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್. ಪುಷ್ಪಲತಾ ಹಾಗೂ ಸಂಸ್ಥೆಯ ಕಾರ್ಯದರ್ಶಿ ಕು. ಎಸ್. ಭಾರತಿ ಅವರ ಸಂಘಟನಾ ಶ್ರಮ ಪ್ರಮುಖವಾಗಿದೆ. ಈ ಸಂಸ್ಥೆಯು ಸತತ 10 ವರ್ಷಗಳಿಂದ ಭಾರತ ವಿವಿಧ ರಾಜ್ಯಗಳಲ್ಲಿ ಯಕ್ಷಗಾನ ಮಾತ್ರವಲ್ಲದೆ ಜಾನಪದ ಕಲೆಯಾದ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಲಂಬಾಣಿ ನೃತ್ಯ ಸೇರಿದಂತೆ ಹಲವು ಜಾನಪದ ನೃತ್ಯ ಪ್ರಕಾರಗಳನ್ನು ಕರ್ನಾಟಕದ ಪರವಾಗಿ ಯಶಸ್ವಿ ಪ್ರದರ್ಶನ ನೀಡಿರುವುದರ ಜೊತೆಗೆ ಸತತ 4 ಬಾರಿ ನವದೆಹಲಿಯ ರಾಜ್ ಪಥ್ ನಲ್ಲಿ ನಡೆಯುವ ಜನವರಿ 26ರ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಜಾನಪದ ಕಲೆಯನ್ನು ಪ್ರದರ್ಶಿಸಿದ್ದಾರೆ, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಸಬಲೀಕರಣವನ್ನು ಧ್ಯೇಯವಾಗಿ ಇಟ್ಟುಕೊಂಡು ಉಚಿತ ಜಾನಪದ ಕಲೆಗಳ ತರಬೇತಿ ಮತ್ತು ಕಲಾವಿದರಿಗೆ ವೇದಿಕೆಗಳನ್ನು ಒದಗಿಸುತ್ತಾ ಬಂದಿದೆ ಹಾಗೂ ಗಿನ್ನಿಸ್ ವಿಶ್ವ ದಾಖಲೆ ಸೇರಿದಂತೆ ಹಲವಾರು ಸನ್ಮಾನ ಮತ್ತು ಗೌರವವನ್ನು ಸಂಸ್ಥೆ ತನ್ನ ಮುಡಿಗೆ ಏರಿಸಿ ಕೊಂಡಿದೆ ಅದೇ ರೀತಿ ಪಟ್ಲ ಫೌಂಡೇಶನ್ನ ಶಿವಮೊಗ್ಗ ಜಿಲ್ಲಾ ಸಂಚಾಲಕರಾದ ನಗರ ರಾಘವೇಂದ್ರ ಅವರ ಮಾರ್ಗದರ್ಶನ ಮತ್ತು ಸಹಕಾರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು, ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಹಾಗೂ ಪ್ರದರ್ಶನ ಯಶಸ್ವಿಯಾಗುವಂತೆ ಶ್ರಮಿಸಿದ ಎಲ್ಲರ ಕಾರ್ಯ ಶ್ಲಾಘನೀಯವಾಗಿದೆ.
ಮಲೆನಾಡಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ, ಶಿವಶರಣೆ ಅಕ್ಕಮಹಾದೇವಿ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಶಿರಾಳಕೊಪ್ಪ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಿಪ್ಪನ್ಪೇಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಣಂದೂರು, ಸಾಧನ ವಿದ್ಯಾ ಕೇಂದ್ರ ಆನಂದಪುರ, ಸರ್ಕಾರಿ ಪದವಿ ಪೂರ್ವ ಕಾಲೇಜು ನಗರ, ವಿದ್ಯಾರ್ಥಿಗಳ ಪ್ರತಿಭೆ ಗುಜರಾತ್ನಲ್ಲಿ ಅನುರಣಿಸಿದೆ. ಯಕ್ಷಗಾನದ ಹೆಜ್ಜೆ ರಾಷ್ಟ್ರಮಟ್ಟದಲ್ಲಿ ಮೊಳಗಿದೆ. ಇದು ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲ, ಇಡೀ ಕರ್ನಾಟಕದ ಕಲಾ ಲೋಕಕ್ಕೆ ಹೆಮ್ಮೆಯ ಕ್ಷಣವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.