ಸಾಮಾಜಿಕ ಜಾಲತಾಣಗಳನ್ನು ಜಾಗ್ರತೆಯಿಂದ ಬಳಸಿ: ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್

KannadaprabhaNewsNetwork |  
Published : Nov 04, 2026, 12:30 AM IST
ಪೋಟೊ: 03ಎಸ್‌ಎಂಜಿಕೆಪಿ07ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಯ 40ನೇ ಸಂಸ್ಥಾಪನಾ ದಿನ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿದರು. | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳಿಂದ ಅನೈತಿಕ ಚಟುವಟಿಕೆಗಳು ಸಮಾಜದಲ್ಲಿ ಹೆಚ್ಚಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಇಂದಿನ ಯುವಪೀಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮತ್ತು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವುದು ಅವರ ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಮಾಜಿಕ ಜಾಲತಾಣಗಳಿಂದ ಅನೈತಿಕ ಚಟುವಟಿಕೆಗಳು ಸಮಾಜದಲ್ಲಿ ಹೆಚ್ಚಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಇಂದಿನ ಯುವಪೀಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮತ್ತು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವುದು ಅವರ ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಯ 40ನೇ ಸಂಸ್ಥಾಪನಾ ದಿನ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಇನ್ಸ್ಟಾಗ್ರಾಂ, ಎಕ್ಸ್, ವಾಟ್ಸ್ಯಾಪ್ ನಂತಹ ಸಾಮಾಜಿಕ ವೇದಿಕೆಗಳಲ್ಲಿ ನಮ್ಮ ಗುರುತುಗಳನ್ನು ಮರೆಮಾಚಿ ಅಥವಾ ತಮಗರಿವಿಲ್ಲದಂತೆಯೇ ಮಾಡುವ ಯಾವುದೇ ಕಾನೂನು ಬಾಹಿರ ಪೋಸ್ಟ್‌ಗಳು, ಕಾಮೆಂಟ್‌ಗಳು ವಿದ್ಯಾರ್ಥಿಗಳ ಮುಂದಿನ ವೃತ್ತಿಜೀವನಕ್ಕೆ ಮತ್ತು ಭವಿಷ್ಯಕ್ಕೆ ಮಾರಕವಾಗಲಿದೆ. ಒಂದು ಬಾರಿ ಲಾಗಿನ್ ಆಗಿ ಡಿಜಿಟಲ್ ಮಾಧ್ಯಮ ಬಳಸಿದರೆ ಸಾಕು. ನಿಮ್ಮ ಡಿಜಿಟಲ್ ಹೆಜ್ಜೆಗುರುತುಗಳನ್ನು ಅಳಿಸಿ ಹಾಕಲಾಗುವುದಿಲ್ಲ. ಹೀಗಾಗಿ, ಇಂತಹ ಚಟುವಟಿಕೆಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.

ಇನ್ನು ಕೃತಕ ಬುದ್ಧಿಮತ್ತೆ ಎಲ್ಲ ರಂಗಗಳನ್ನು ಆವರಿಸಿಕೊಳ್ಳುತ್ತಿದ್ದು, ಇದಕ್ಕೆ ಶೈಕ್ಷಣಿಕ ಕ್ಷೇತ್ರ ಕೂಡ ಹೊರತಲ್ಲ. ಜೆಮಿನಿ, ಚಾಟ್ ಜಿಪಿಟಿ, ಕ್ಲಾಡ್ ನಂತಹ ಎಐ ಸಾಧನಗಳು ವಿದ್ಯಾರ್ಥಿಗಳ ಓದಿಗೆ ಪೂರಕವಾಗಿ ಬಳಕೆಯಾಗಬೇಕೇ ವಿನಃ, ಇವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾದರೆ ಮುಂದೆ ಸರಕಾರಿ ಹಾಗೂ ಕಾರ್ಪೊರೆಟ್ ಕ್ಷೇತ್ರದ ಉದ್ಯೋಗಗಳಿಗೆ ಆಯ್ಕೆಯ ವೇಳೆ ನಿರಾಶೆಯಾಗುವುದು ಖಂಡಿತ ಎಂದು ಎಚ್ಚರಿಸಿದರು.

ಉನ್ನತ ಶಿಕ್ಷಣ ಪಡೆದ ಇಂದಿನ ಯುವ ಜನಾಂಗ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವುದೇ ದೊಡ್ಡ ಸಾಧನೆಯ ಸಂಕೇತ ಎಂದು ಆಲೋಚಿಸುವುದು ಸಹಜ. ಆದರೆ, ಇಂಥ ಹುದ್ದೆಗಳು ದೊರಕದವರು ನಿರಾಶರಾಗಬೇಕಿಲ್ಲ. ಯಾವುದೇ ಉದ್ಯೋಗ ಆಯ್ದುಕೊಂಡರೂ ಅದನ್ನು ಶ್ರದ್ಧೆಯಿಂದ ನಿರ್ವಹಿಸುವುದೇ ನಿಜವಾದ ಸಾಧನೆ ಎಂದರು.

​ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ರಿಯಾಶೀಲರಾಗಿರಬೇಕು. ಮುಂಬರುವ ದಿನಗಳಲ್ಲಿ ವಿಶಿಷ್ಟ ಕಲಿಕಾ ವಿಚಾರಗಳು ಮತ್ತು ಅನುಭವಗಳಿಗೆ ವಿಶ್ವವಿದ್ಯಾಲಯವು ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡಲಿದೆ ಎಂದು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಪ್ರೊ. ಜಿ. ಪ್ರಶಾಂತ್ ನಾಯಕ್, ಡೀನರುಗಳಾದ ಪ್ರೊ. ಎಸ್. ಕೆ. ನರಸಿಂಹಮೂರ್ತಿ, ಪ್ರೊ. ಗಜಾನನ ಪ್ರಭು, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾ. ತಳವಾರ ವೆಂಕಟೇಶ್, ವಿವಿಧ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆ ಒಗ್ಗಟ್ಟುಬೆಳೆಸುವ ಶಕ್ತಿಯುತ ವೇದಿಕೆ: ಸಚಿವ ಕಾಶಪ್ಪನವರ
ಶ್ರೀಧರ ಪಾಂಡಿ ಸಂಸ್ಮರಣೆ, ಪ್ರಶಸ್ತಿ, ಪುರಸ್ಕಾರ ಪ್ರದಾನ