ತೆವರೆತೆಪ್ಪ ಸುತ್ತಮುತ್ತಲಿನ ಗ್ರಾಮಗಳಿಗೆ ಮಾರಕವಾಗಿದ್ದ ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದಕ್ಕೆ ದ್ವೇಷದ ರಾಜಕಾರಣ ಮಾಡಲಾಗಿದ್ದು, ರೈತನ ಅಡಿಕೆ ತೋಟವನ್ನು ನಾಶಪಡಿಸಿರುವ ಘಟನೆ ಮಾನವೀಯತೆಯನ್ನೇ ಮರೆತಂತಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಆನವಟ್ಟಿ
ತೆವರೆತೆಪ್ಪ ಸುತ್ತಮುತ್ತಲಿನ ಗ್ರಾಮಗಳಿಗೆ ಮಾರಕವಾಗಿದ್ದ ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದಕ್ಕೆ ದ್ವೇಷದ ರಾಜಕಾರಣ ಮಾಡಲಾಗಿದ್ದು, ರೈತನ ಅಡಿಕೆ ತೋಟವನ್ನು ನಾಶಪಡಿಸಿರುವ ಘಟನೆ ಮಾನವೀಯತೆಯನ್ನೇ ಮರೆತಂತಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಮಾಜಿ ಸಚಿವ ಹರತಾಳು ಹಾಲಪ್ಪ ಅವರೊಂದಿಗೆ ತೋಟ ಕಳೆದುಕೊಂಡ ಸಂತ್ರಸ್ತ ರೈತ ದೇವರಾಜ್ ದೊಡ್ಡಮನೆ ಅವರ ತೋಟಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕರಾಬು ಕೆರೆಕಟ್ಟೆ ಅಥವಾ ಗೋಮಾಳಕ್ಕೆ ಸೇರಿದ ಜಾಗ ಎಂಬ ಮಾಹಿತಿ ರೈತನಿಗೆ ಇರಲಿಲ್ಲ. ಪೂರ್ವಜರ ಕಾಲದಿಂದಲೂ ಈ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬಂದಿದ್ದು, ಕಳೆದ 20 ವರ್ಷಗಳಿಂದ ಅಡಕೆ ಬೆಳೆ ಬೆಳೆಸುವ ಮೂಲಕ ಆರ್ಥಿಕವಾಗಿ ಸುಧಾರಿಸಿಕೊಳ್ಳುವ ಕನಸು ಕಂಡಿದ್ದರು. ಫಸಲು ನೀಡುತ್ತಿದ್ದ 550 ಅಡಿಕೆ ಮರಗಳನ್ನು ಕಡಿದು ಬಡ ರೈತನ ಬದುಕಿಗೆ ಕೊಡಲಿ ಪೆಟ್ಟು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಂತಹ ಘಟನೆ ನಡೆದಿರುವುದು ಖಂಡನೀಯ ಎಂದರು.
ಮುಖ್ಯಮಂತ್ರಿಗಳು ತಮ್ಮ ಭಾಷಣಗಳಲ್ಲಿ ಮೂರು ಎಕರೆವರೆಗಿನ ಒತ್ತುವರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವುದಾಗಿ ಹೇಳುತ್ತಾರೆ. ಆದರೆ, ಒಂದು ಎಕರೆಗೂ ಕಡಿಮೆ ಜಮೀನಿನಲ್ಲಿ ಬೆಳೆದಿದ್ದ ದೇವರಾಜ್ ಅವರ ಅಡಿಕೆ ತೋಟವನ್ನು ನಾಶಪಡಿಸಿರುವುದು ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಅಡಿಕೆ ಮರಗಳನ್ನು ಕಡಿದ ಪ್ರಕರಣಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೊಣೆ ಹೊತ್ತು ರೈತನಿಗೆ ನ್ಯಾಯ ಒದಗಿಸಬೇಕು. ಲೋಕಾಯುಕ್ತರು ಪ್ರಕರಣದ ಕುರಿತು ವರದಿ ಕೇಳಿದ್ದರೂ ವರದಿ ನೀಡದೆ ತೋಟ ನಾಶಪಡಿಸಿರುವ ಉಪತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಲ್ಲು ಗಣಿಗಾರಿಕೆಯಿಂದ ಮನೆಗಳು ಹಾಗೂ ಕೊಳವೆಬಾವಿಗಳಿಗೆ ಹಾನಿಯಾಗುತ್ತಿದೆ ಎಂದು ಹೋರಾಟ ನಡೆಸಿದ ರೈತನ ವಿರುದ್ಧವೇ ಇಂತಹ ಕ್ರಮ ಕೈಗೊಂಡಿರುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಈವರೆಗೂ ಸಂತ್ರಸ್ತ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ರೈತ ವಿರೋಧಿ ನೀತಿ ಅನುಸರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೈತರಿಗೆ ಅನ್ಯಾಯವಾಗುತ್ತಿದೆ: ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವಿಚಾರಿಸಿದರೆ ತೋಟ ಕಡಿದಿರುವ ಘಟನೆ ಬಗ್ಗೆ ತಮಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಇದರಿಂದ ಸ್ಥಳೀಯ ಆಡಳಿತದ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಅಹಂಕಾರದ ಮಾತುಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ತಾವು ಶಾಸಕರಾಗಿದ್ದಾಗ ಹಾಗೂ ಬಿ.ವೈ. ರಾಘವೇಂದ್ರ ಸಂಸದರಾಗಿದ್ದಾಗ ರೈತರ ಒಂದು ಗುಂಟೆ ಜಮೀನನ್ನೂ ತೆರವುಗೊಳಿಸಲು ಅವಕಾಶ ನೀಡಿರಲಿಲ್ಲ. ಅದೇ ರೀತಿ ಹೊಸ ಒತ್ತುವರಿಗೂ ಅವಕಾಶ ಕಲ್ಪಿಸಿರಲಿಲ್ಲ. 2013ರಲ್ಲಿ ಸರ್ಕಾರದ ಆದೇಶದಂತೆ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ತೊಂದರೆ ನೀಡಬಾರದು ಎಂಬ ನಿಯಮವಿದ್ದರೂ ಈಗಿನ ಆಡಳಿತದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದೇ ತಪ್ಪಾಯಿತೇ?
ಸಂತ್ರಸ್ತ ರೈತ ದೇವರಾಜ್ ದೊಡ್ಡಮನೆ ಮಾತನಾಡಿ, ಗ್ರಾಮಗಳ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದ್ದ ಕಲ್ಲು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನನ್ನ ತೋಟವನ್ನು ನಾಶಪಡಿಸಿದ್ದಾರೆ. ಗ್ರಾಮಗಳಿಗೆ ಮಾರಕವಾಗಿರುವ ಗಣಿಗಾರಿಕೆ ವಿರುದ್ಧ ಅಧಿಕಾರಿಗಳು ಮಾತನಾಡುತ್ತಿಲ್ಲ. ಆದರೆ, ಅದರ ವಿರುದ್ಧ ಧ್ವನಿ ಎತ್ತುವ ರೈತರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ತೋಟ ನಾಶವಾಗಿರುವುದರಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.
ರೈತನ ತಂದೆ ಮಂಜಪ್ಪ ಮಾತನಾಡಿ, ಘಟನೆ ನಡೆದ ಬಳಿಕ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದೆ. ವಿಷಯ ತಿಳಿದ ಬಿಜೆಪಿ ಮುಖಂಡರು ಘಟನೆ ನಡೆದ ದಿನದಿಂದಲೂ ನಮ್ಮ ಕುಟುಂಬದೊಂದಿಗೆ ನಿಂತು ಧೈರ್ಯ ತುಂಬಿದ್ದಾರೆ. ಆದರೆ, ನನ್ನ ಮಗ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದರೂ ಆ ಪಕ್ಷದ ಯಾವೊಬ್ಬ ಮುಖಂಡರೂ ನಮ್ಮ ನೆರವಿಗೆ ಬಂದಿಲ್ಲ ಎಂದು ನೋವು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಮುಖಂಡರಾದ ಡಾ. ಜ್ಞಾನೇಶ್, ಕಡ್ಲೆರ್ ರುದ್ರಪ್ಪ, ಎ.ಎಲ್. ಅರವಿಂದ್, ಹೊನ್ನಪ್ಪ ಎಣ್ಣೆಕೊಪ್ಪ, ಮಂಜಪ್ಪ ಲಕ್ಕವಳ್ಳಿ ಸೇರಿದಂತೆ ಸಂತ್ರಸ್ತ ರೈತ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.