ಮಕ್ಕಳಿಗೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಶಿಕ್ಷಣ ಬೇಕು

KannadaprabhaNewsNetwork |  
Published : Jan 18, 2026, 01:15 AM IST
ಪೋಟೋ, 17ಎಚ್‌ಎಸ್‌ಡಿ2: ಹೊಸದುರ್ಗ ತಾಲೂಕಿನ  ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ   ಗುರುಪಾದೇಶ್ವರ ಪ್ರೌಢಶಾಲೆ ಹಾಗೂ   ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ  ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಕ್ಕಳಿಗೆ ಅಂಕ ಗಳಿಕೆಯ ಶಿಕ್ಷಣ ಮುಖ್ಯವಾಗದೆ ನೈತಿಕ ನೆಲೆಗಟ್ಟು, ಸಾಮಾಜಿಕ ಪ್ರಜ್ಞೆ ಮೂಡಿಸುವ ಶಿಕ್ಷಣ ಕೊಡಬೇಕು. ಇಂದು ವಿದ್ಯಾವಂತರು ಹೆಚ್ಚಾಗಿದ್ದಾರೆ ಆದರೆ ಅವರಲ್ಲಿ ನೈತಿಕ ಹಾಗೂ ಸಾಮಾಜಿಕ‌ ಪ್ರಜ್ಞೆಯ ಕೊರತೆಯಿಂದ ಸಮಾಜಘಾತುಕ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಮ್ಮ ವಿದ್ಯಾರ್ಥಿಗಳಿಗೆ ಕಲಿಯುವ ಹಸಿವಿರಬೇಕು. ಸೋಲನ್ನೆ ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳುವ ಛಲ ಮತ್ತು ಮನೋಬಲ ಇರಬೇಕು. ಕ್ರಮಬದ್ಧ ಅಧ್ಯಯನ, ಶಿಸ್ತು, ಪರಿಶ್ರಮ ಮತ್ತು ವಿನಯ. ಇವುಗಳನ್ನು ಆಭರಣವನ್ನಾಗಿ ಮಾಡಿಕೊಂಡರೆ ಜ್ಞಾನಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂದರು.

ಮಕ್ಕಳಿಗೆ ಅದ್ಭುತವಾದ ಪ್ರತಿಭೆ ಇದೆ. ಅದನ್ನು ಹೇಗೆ ಹೊರ ತರಬೇಕು ಎನ್ನುವ ಅರಿವು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಇರಬೇಕು. ನಮ್ಮ ಮಕ್ಕಳು ಸುಂದರವಾದ ಶಿಲ್ಪಿಗಳು. ದುರ್ಭಾವನೆಗಳನ್ನು ಕಿತ್ತಾಕಿ ಸದ್ಭಾವನೆಗಳನ್ನು ಬೆಳೆಸಿಕೊಂಡು ಗುರಿ ಮುಟ್ಟಬೇಕು. ಗುರಿ ತೋರಿಸುವಂಥ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಆಗ ಖಂಡಿತ ಪರೀಕ್ಷೆಯಲ್ಲಿ ಪ್ರವೀಣರಾಗಲು ಸಾಧ್ಯ ಎಂದರು.

ಸಮಾರೋಪದ ನುಡಿಗಳನ್ನಾಡಿದ ಚಿತ್ರದುರ್ಗದ ಉಪ ನಿರ್ದೇಶಕ ಕಚೇರಿಯ ವಿಷಯ ಪರಿವೀಕ್ಷಕ ಸಿ.ರಂಗನಾಯ್ಕ್ ಮಾತನಾಡಿ, ವಿದ್ಯಾರ್ಥಿ ಸಂಘ ಮಕ್ಕಳಲ್ಲಿ ಶಿಸ್ತು ಮೂಡಿಸಲು ಸಹಾಯ ಮಾಡುತ್ತದೆ. ಮಕ್ಕಳ ಮೇಲೆ ಶಿಸ್ತನ್ನು ಬಲವಂತವಾಗಿ ಹೇರಬಾರದು. ಪ್ರೀತಿ, ವಿಶ್ವಾಸದಿಂದ ಅವರನ್ನು ಶಿಸ್ತಿಗೆ ಒಳಪಡಿಸಬೇಕು. ಜೀವನದ ಎಲ್ಲ ಕನಸುಗಳನ್ನು ಈಡೇಸಬೇಕಾದರೆ ಪುಸ್ತಕ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಪುಸ್ತಕ ಪ್ರೇಮವನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಆಸ್ತಿಗಿಂತ ಮಾಸ್ತಿಯ ಮೇಲೆ, ಚಿನ್ನಕ್ಕಿಂತ ರನ್ನನ ಮೇಲೆ, ಕೇಶಕ್ಕಿಂತ ಕೇಶಿರಾಜನ ಮೇಲೆ ಪ್ರೀತಿ ತೋರಿಸಬೇಕು. ನಮ್ಮ ಮಕ್ಕಳಿಗೆ ಪೋಷಕರ ತ್ಯಾಗದ ಮಹತ್ವ ಅರಿಯಬೇಕು. ನಡೆ ನುಡಿ ಸಿದ್ಧಾಂತ, ಭಾವಶುಚಿಯನ್ನು ಕಲಿಸಬೇಕು ಎಂದರು.

ಮಠದಲ್ಲಿ ಓದುವ ಮಕ್ಕಳು ಜೇಬಲ್ಲಿ ಭಕ್ತಿಯನ್ನಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಸಂಸ್ಕಾರಯುತ ವಿದ್ಯಾರ್ಥಿಯಾಗಿ ಹೊರಹೊಮ್ಮಲು ಸಾಧ್ಯ. ನಿಜವಾದ ಸ್ವರ್ಗ ಅಮ್ಮನ ಮಡಿಲು, ಅಪ್ಪನ ಹೆಗಲು. ಇದರ ಮಹತ್ವವನ್ನು ಅರಿಯಬೇಕು. ಅದರ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಅನುಕರಣೆ ಮಾಡುವುದನ್ನು ಕಲಿಸಬಾರದು. ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿದರೆ ಖಂಡಿತಾ ಒಳ್ಳೆಯ ಅಂಕ ಗಳಿಸಲು ಸಾಧ್ಯ ಎಂದರು.

ಶಿಕ್ಷಣ ಸಂಯೋಜಕ ಜಿ.ಎಂ.ಆನಂದ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಿ.ಕೆ.ಶ್ರೀನಿವಾಸ, ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸಿ.ಕೆ.ಸ್ವಾಮಿ, ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ್ ಮಾತನಾಡಿದರು. ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಿಆರ್‌ಪಿ ರುದ್ರೇಶ್ ಟಿ.ಎಸ್ ಹಾಗೂ ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ್ ಎಚ್.ಎಸ್ ಹಾಗೂ ಶರಣ ವಚನಗೀತೆಗಳನ್ನು ಹಾಡಿದರು. ಎಂ.ಸುಧಾ ಸ್ವಾಗತಿಸಿದರೆ ಸೋಮಶೇಖರ್ ಸಿ.ಆರ್ ನಿರೂಪಿಸಿದರು. ವಾರ್ಷಿಕೋತ್ಸವದ ವರದಿಯನ್ನು ಕಾವ್ಯ ಹೆಚ್ ಆರ್ ವಾಚಿಸಿದರು. ಉಭಯ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರೆಗೆ ಹಣ ನೀಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ಉದಾಸೀನ
ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ