ಶಾಲಾ ಪಠ್ಯದಲ್ಲಿ ಮಕ್ಕಳಿಗೆ ಯೋಗ ಶಿಕ್ಷಣದ ಅಗತ್ಯವಿದೆ: ತಾಲೂಕು ಪಂಚಾಯತಿ ಮಾಜಿ ಸದಸ್ಯ ಬಿ.ಎಸ್. ಸೋಮಶೇಖರ್

KannadaprabhaNewsNetwork | Published : Jun 23, 2024 2:08 AM

ಸಾರಾಂಶ

ಯೋಗ ಶಿಕ್ಷಣ ಶಾಲಾ ಪಠ್ಯಕ್ರಮದಲ್ಲಿ ಒಂದಾಗಬೇಕು ಎಂದು ಸರ್ಕಾರಿ ಕೆ.ಪಿ.ಎಸ್ ಶಾಲೆ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮತ್ತು ತಾಲೂಕು ಪಂಚಾಯತಿ ಮಾಜಿ ಸದಸ್ಯ ಬಿ.ಎಸ್.ಸೋಮಶೇಖರ್ ತಿಳಿಸಿದರು. ಹಳೆಬೀಡಿನಲ್ಲಿ ಹಮ್ಮಿಕೊಂಡ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ದಿನ

ಕನ್ನಡಪ್ರಭ ವಾರ್ತೆ ಹಳೆಬೀಡು

ಇಂದಿನ ದಿನಗಳಲ್ಲಿ ಯೋಗ ಮತ್ತು ಧ್ಯಾನದ ಅವಶ್ಯಕತೆ ಮಕ್ಕಳಿಗೆ ಬೇಕೇ ಬೇಕು. ಹಾಗಾಗಿ ಯೋಗ ಶಿಕ್ಷಣ ಶಾಲಾ ಪಠ್ಯಕ್ರಮದಲ್ಲಿ ಒಂದಾಗಬೇಕು ಎಂದು ಸರ್ಕಾರಿ ಕೆ.ಪಿ.ಎಸ್ ಶಾಲೆ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮತ್ತು ತಾಲೂಕು ಪಂಚಾಯತಿ ಮಾಜಿ ಸದಸ್ಯ ಬಿ.ಎಸ್.ಸೋಮಶೇಖರ್ ತಿಳಿಸಿದರು.

ನಗರದ ಸರ್ಕಾರಿ ಕೆ.ಪಿ.ಎಸ್ ಶಾಲೆಯಲ್ಲಿ ಹಮ್ಮಿಕೊಂಡ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ‘ಗ್ರಾಮಾಂತರ ಪ್ರದೇಶದಲ್ಲಿ ಹಿಂದೆ ನಾವು ಚಿನ್ನಿದಾಂಡು, ಕಬಡ್ಡಿ, ಖೋ ಖೋ, ಈಜು ಹೀಗೆ ನಮ್ಮ ದೇಹಗಳಿಗೆ ವ್ಯಾಯಾಮ ಆಗುವ ಹಲವು ಆಟಗಳನ್ನು ಆಡುತ್ತಿದ್ದೆವು. ಆದರೆ ಇಂದಿನ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಯಾವ ಆಟದ ಬಗ್ಗೆಯೂ ಆಸಕ್ತಿ ಇಲ್ಲ. ಕ್ರಿಕೆಟ್‌ ಅನ್ನು ಟಿವಿಯಲ್ಲಿ ನೋಡುತ್ತಾರೆ.ಇವತ್ತಿನ ಮಕ್ಕಳಿಗೆ ಓದುವ ಕಡೆಗೆ ಒತ್ತಡ ಜಾಸ್ತಿ. ಆದ ಕಾರಣ ಮಕ್ಕಳಿಗೆ ನಿತ್ಯ ಯೋಗ ಶಿಕ್ಷಣ ಕೊಡಬೇಕು’ ಎಂದು ತಿಳಿಸಿದರು.

ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ರಘುನಾಥ್ ಮಾತನಾಡಿ, ‘ಮಕ್ಕಳು ಶಾಲೆಯಲ್ಲಿ ನೀಡಿರುವ ಹೋಂವರ್ಕ ಬಗ್ಗೆ ಹೆಚ್ಚು ವ್ಯಾಮೋಹ ನೀಡುತ್ತ ಬರುವುದು ಸಾಮಾನ್ಯವಾಗಿದೆ. ಮನೆಯಿಂದ ಶಾಲೆ, ಶಾಲೆಯಿಂದ ಮನೆಗೆ ಬರುವುದು ನಿತ್ಯ ಒಂದು ವಾಡಿಕೆ. ಆದರೆ ಆಟದ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಪೋಷಕರು ಸಹ ಮಕ್ಕಳಿಗೆ ಓದುವುದು ಬಿಟ್ಟರೆ ಬೇರೆ ಯಾವುದೂ ಬೇಡ. ಓದುವ ಬಗ್ಗೆ ಹೆಚ್ಚು ಗಮನ ಕೊಡಿ ಎಂದು ಒತ್ತಡವನ್ನು ಹೇರುತ್ತ ಬರುತ್ತಾರೆ. ಇದರ ಮಧ್ಯೆ ನಿಮ್ಮ ಮಕ್ಕಳಿಗೆ ಯೋಗ ಶಿಕ್ಷಣವನ್ನು ನೀಡಿದರೆ ನಿಮ್ಮ ಮಕ್ಕಳು ಆರೋಗ್ಯವಂತರಾಗುತ್ತಾರೆ. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಚೆನ್ನಾಗಿ ಬೆಳೆಯುತ್ತದೆ. ಧ್ಯಾನ, ಯೋಗದಿಂದ ಮಕ್ಕಳಿಗೆ ಪಾಠದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಹಾಗಾಗಿ ಯೋಗದ ಬಗ್ಗೆ ಹೆಚ್ಚು ಗಮನ ಕೊಡಬೇಕು’ ಎಂದು ತಿಳಿಸಿದರು.

ಕೆ.ಪಿ.ಎಸ್ ಶಾಲೆಯ ಉಪಪ್ರಾಂಶುಪಾಲ ಮುಳ್ಳಯ್ಯ ಮಾತನಾಡಿ, ಇಂದಿನ ಯೋಗ ಶಿಕ್ಷಣ ಮಕ್ಕಳಿಗೆ ಅವಶ್ಯಕತೆ ಇದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಿನ ಜತೆಗೆ ಆರೋಗ್ಯ ಮುಖ್ಯ ಸಣ್ಣ ಪುಟ್ಟ ಯೋಗಾಸನದ ಧ್ಯಾನಗಳನ್ನು ಮಾಡಿ. ಅದರಲ್ಲೂ ಮೂಲ ಮಂತ್ರ ಓಂಕಾರದ ಬಗ್ಗೆ ನಿತ್ಯ ಹೇಳಿದರೆ ಮಕ್ಕಳಿಗೆ ಒಳ್ಳೆಯ ಉಚ್ಚಾರ, ಜ್ಞಾಪಕದ ಶಕ್ತಿ ಹೆಚ್ಚಿನ ರೀತಿಯಲ್ಲಿ ಬರುತ್ತದೆ. ಮಕ್ಕಳು ಯೋಗಾಸನಕ್ಕೆ ಹೆಚ್ಚು ಆಧ್ಯತೆ ಕೊಡಬೇಕು ಎಂದು ತಿಳಿಸಿದರು.

ದೈಹಿಕ ಶಿಕ್ಷಕರಾದ ಮಹೇಶ್ವರಪ್ಪ, ಇತರ ವಿದ್ಯಾರ್ಥಿಗಳು ಇದ್ದರು.

Share this article