ಹರಪನಹಳ್ಳಿ: ಪೌರ ಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗಬಾರದು, ಬದಲಾಗಿ ಉನ್ನತ ಶಿಕ್ಷಣ ಕೊಡಿಸಿ ಉನ್ನತ ಅಧಿಕಾರಿಗಳನ್ನಾಗಿ ಮಾಡಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಪೌರ ಕಾರ್ಮಿಕರಿಗೆ ಸಲಹೆ ನೀಡಿದ್ದಾರೆ.
ನಾವು ಸದಸ್ಯರಾಗಿದ್ದಾಗಲೇ ಪೌರ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡಲು 5 ಎಕರೆ ಜಮೀನು ಖರೀದಿಗೆ ನಿರ್ಣಯ ಕೈಗೊಳ್ಳಲಾಗಿತ್ತು, ಆ ಪ್ರಕಾರ ಜಮೀನು ಖರೀದಿ ಮಾಡಲಾಗಿದೆ, ಶೀಘ್ರ ನಿವೇಶನ ಮಂಜೂರಾಗುತ್ತವೆ ಎಂದು ಹೇಳಿದರು.
ಇಲ್ಲಿ ಪೌರ ಕಾರ್ಮಿಕರ ಸಮಸ್ಯೆ ಇದ್ದು, ಕನಿಷ್ಠ 100 ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲು ಶಾಸಕರು ಒಪ್ಪಿದ್ದಾರೆ, ಪಾರದರ್ಶಕವಾಗಿ ನೇಮಕಾತಿ ಆಗುತ್ತದೆ, ಯಾರಿಗೂ ಸಂಬಂಧ ಹಣ ಕೊಡಬೇಡಿ ಎಂದು ತಿಳಿಸಿದರು.ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ ಮಾತನಾಡಿ, ನಗರದ ಸೌಂದರ್ಯ, ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿರುವವರು ಪೌರ ಕಾರ್ಮಿಕರು ಆದ್ದರಿಂದ ಇವರಿಗೆ ಸರ್ಕಾರದ ಎಲ್ಲ ಸೌಲಭ್ಯ ಕಲ್ಪಿಸಿಕೊಟ್ಚಿದ್ದೇವೆ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಸಾಹೇಬ್ ಮಾತನಾಡಿ, ಎಲ್ಲ ಹುಟ್ಟು, ಸಾವುಗಳಿಗೂ ನಗರಸಭೆ ಅಗತ್ಯವಿದೆ ಎಂದ ಅವರು, ನಿಮ್ಮ ಅಭಿವೃದ್ಧಿಗೆ ನಮ್ಮ ಸಹಕಾರ ಯಾವತ್ತು ಇರುತ್ತದೆ ಎಂದು ಪೌರ ಕಾರ್ಮಿಕರಿಗೆ ತಿಳಿಸಿದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಮುಖಂಡರಾದ ಎಚ್. ವಸಂತಪ್ಪ, ಗುಡಿನಾಗರಾಜ, ಅಲೀಂ, ಇಸ್ಮಾಯಿಲ್ ಎಲಿಗಾರ, ಎಂಜಿನಿಯರ್ ಅಮರೇಶ, ಆರೋಗ್ಯ ನಿರೀಕ್ಷಕಿ ಶೋಭಾ ಇತರರು ಇದ್ದರು.