ಪ್ರಾಂಶುಪಾಲರ ಅಮಾನತಿಗಾಗಿ ಮಕ್ಕಳ ಪ್ರತಿಭಟನೆ

KannadaprabhaNewsNetwork |  
Published : Mar 10, 2026, 03:00 AM IST
ಪೋಟೋ: ಎಚ್‌ಎಚ್‌ಆರ್‌01 | Kannada Prabha

ಸಾರಾಂಶ

ಸಮೀಪದ ಆನವೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರನ್ನು ಕೂಡಲೇ ಅಮಾನತು ಮಾಡುವ ವರೆಗೆ ವಸತಿ ಶಾಲೆ ಒಳ ಹೋಗುವುದಿಲ್ಲ ಎಂದು ಆಗ್ರಹಿಸಿ ಹತ್ತನೇ ತರಗತಿ ವಿದ್ಯಾರ್ಥಿಗಳು ಶನಿವಾರ ವಸತಿ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಸಮೀಪದ ಆನವೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರನ್ನು ಕೂಡಲೇ ಅಮಾನತು ಮಾಡುವ ವರೆಗೆ ವಸತಿ ಶಾಲೆ ಒಳ ಹೋಗುವುದಿಲ್ಲ ಎಂದು ಆಗ್ರಹಿಸಿ ಹತ್ತನೇ ತರಗತಿ ವಿದ್ಯಾರ್ಥಿಗಳು ಶನಿವಾರ ವಸತಿ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು.

ವಸತಿ ಶಾಲೆಯ ಅವ್ಯವಸ್ಥೆ ಕುರಿತಂತೆ ಇಲಾಖೆಯ ಜಿಲ್ಲಾಧಿಕಾರಿ ಶೋಭ ಶನಿವಾರ ಮದ್ಯಾಹ್ನ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿ ಹೋಗಿದ್ದಾರೆ. ನಂತರ ವಿದ್ಯಾರ್ಥಿಗಳು ಪ್ರತೀ ಬಾರಿ ಅಧಿಕಾರಿಗಳು ಭೇಟಿ ನೀಡುತ್ತಾರೆ, ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಕೆಲ ವಿದ್ಯಾರ್ಥಿಗಳು ವಸತಿ ಶಾಲೆಯ ಮುಂಭಾಗ ಕುಳಿತು ಪ್ರತಿಭಟನೆ ಆರಂಭಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಗ್ರಾಮಸ್ಥರು ಮಕ್ಕಳ ಸಮಸ್ಯೆ ಕೇಳಿ ಪ್ರಾಚಾರ್ಯೆ ರಂಗಮ್ಮ.ಎಪ್ ಹೂಗಾರ ಅವರನ್ನು ತರಾಟೆಗೆ ತೆಗೆದುಕೊಂಡು ಶಾಲೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳು ಪಾಳು ಬಿದ್ದಿವೆ, ಶೌಚಾಲಯಗಳ ಬಾಗಿಲು ಸರಿ ಇಲ್ಲ, ಕಿಟಕಿ ಗಾಜು ಒಡೆದು ಹೋಗಿವೆ, ಶೌಚಾಲಯಗಳು ಕಸದಿಂದ ಬ್ಲಾಕ್ ಆಗಿವೆ, ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಕೊಠಡಿಗಳು ಕತ್ತಲೆಯಿಂದ ಕೂಡಿವೆ ಎಂದು ಆರೋಪಿಸಿದರು.

ಮಕ್ಕಳಿಗೆ ಹಾಸಿಗೆ ನೀಡಿಲ್ಲ, ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ, ಪುಸ್ತಕ, ನೋಟ್ ಬುಕ್, ಸೋಪ್, ಟೂತ್‌ಪೇಸ್ಟ್, ಎಣ್ಣೆ ಸೇರಿದಂತೆ ಯಾವುದೇ ಪರಿಕರಗಳನ್ನು ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕೆಲ ದಿನಗಳ ಹಿಂದೆ ಪುಡ್ ಪಾಯಿಸನ್‌ನಿಂದ ನಮ್ಮ ತರಗತಿ ವಿದ್ಯಾರ್ಥಿನಿಯೊಬ್ಬಳು ಸಾವನಪ್ಪಿದರು. ಮೃತ ಸ್ನೇಹಿತೆಯ ಮುಖವನ್ನು ನೋಡಲು ಅವಕಾಶ ನೀಡಲಿಲ್ಲ. ವಿದ್ಯಾರ್ಥಿನಿಯ ಸಾವನ್ನು ಯಾವೊಬ್ಬ ಅಧಿಕಾರಿಯೂ ಪ್ರಶ್ನಿಸಲಿಲ್ಲ. ಸದ್ಯ ವಸತಿ ಶಾಲೆಯ ವಾತಾವರಣ ಉಸಿರುಗಟ್ಟಿಸುವಂತಿದೆ ಎಂದು ಮಕ್ಕಳು ಗ್ರಾಮಸ್ಥರ ಬಳಿ ಕಣ್ಣೀರಿಟ್ಟರು.

ತಹಸೀಲ್ದಾರ್ ಭೇಟಿ: ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಭದ್ರಾವತಿ ತಾಲೂಕು ತಹಸೀಲ್ದಾರ್ ಪರಸಪ್ಪ ಕುರುಬರ ರಾತ್ರಿ 10-30ರ ಸುಮಾರಿಗೆ ಕಂದಾಯ ಅಧಿಕಾರಿಗಳೊಂದಿಗೆ ವಸತಿ ನಿಲಯಕ್ಕೆ ಭೇಟಿ ನೀಡಿ ತಡ ರಾತ್ರಿ 1-30ರವರೆಗೂ ಮಕ್ಕಳ ಕುಂದುಕೊರತೆಗಳನ್ನು ಆಲಿಸಿದರು.

ಅಲ್ಲಿರುವ ಹಲವಾರು ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಸಂಬಂಧ ಪಟ್ಟ ಇಲಾಖೆಯಿಂದ ದೊರೆಯಬಹುದಾದ ಅನುದಾನ ಒದಗಿಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಕೊನೆಗೆ ಪ್ರಾಂಶುಪಾಲರು ಮತ್ತು ಶಿಕ್ಷಕರು ಮಕ್ಕಳೊಂದಿಗೆ ಸಮನ್ವಯ ಸಾಧಿಸಬೇಕು, ಇಲ್ಲಿರುವ ಎಲ್ಲಾ 250 ಮಕ್ಕಳನ್ನು ತಮ್ಮ ಮಕ್ಕಳೆಂದು ತಿಳಿದುಕೊಂಡು ಸರಿಯಾಗಿ ನೋಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಎಸ್.ರಾಜು, ಗ್ರಾಮಸ್ಥ ರಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಮಧು
ಬೆಂಗಳೂರಿನ ಕೊಳಚೆ ನೀರಿಂದ ತರಕಾರಿಯೂ ವಿಷ : ಸಂಸತ್ತಲ್ಲಿ ಗೌಡ