ಹರಪನಹಳ್ಳಿ: ಶೌಚಾಲಯ ಕೊರತೆ, ಕುಡಿಯುವ ನೀರಿನ ಅಭಾವ, ಊಟಕ್ಕೆ ಕುಳಿತುಕೊಳ್ಳಲು ಜಾಗವಿಲ್ಲ. ಶಾಲೆಯಿಂದ ಬಹಳಷ್ಟು ಮಕ್ಕಳು ಹೊರಗೆ ಅಲೆದಾಡುತ್ತಾರೆ... ಹೀಗೆ ಮಕ್ಕಳು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿದರ ಕೋಸಂಬಿ ಎದುರು ತಮ್ಮ ಶಾಲೆಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡ ಪ್ರಸಂಗ ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.ಮಕ್ಕಳೊಂದಿಗೆ ಮುಕ್ತ ಸಂವಾದ ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಪಾಲ್ಗೊಂಡ ಮಕ್ಕಳು ಮೇಲಿನಂತೆ ಸಮಸ್ಯೆಗಳನ್ನು ನಿವೇದಿಸಿಕೊಂಡರು.
ಇನ್ನೊಬ್ಬ ವಿದ್ಯಾರ್ಥಿನಿ ಸೃಷ್ಟಿ ಹೇಳುವಂತೆ, ಬಾಲಕಿಯರ ಪ್ರೌಢ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ ಕಾಮಗಾರಿಗೆ ಶಂಕುಸ್ಥಾಪನೆ ಆಗಿದೆ ಎಂದು ಬಿಇಒ ಹೇಳಿದರು. ಆಯೋಗದ ಸದಸ್ಯ ಶಶಿಧರ ಕೋಸಂಬಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಕ್ರಮ ವಹಿಸಿ ಎಂದರು.
ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಪರಿಶೀಲಿಸಲಾಗುವುದು ಎಂದರು. ಸ.ಪ.ಪೂ. ಕಾಲೇಜಿನ ಪ್ರೌಡ ಶಾಲಾ ವಿಭಾಗದಲ್ಲಿ ನಿವೇದಿತಾ ಎಂಬ ವಿದ್ಯಾರ್ಥಿನಿ ಕುಡಿಯುವ ನೀರಿನ ಸಮಸ್ಯೆ, ನೀರು ಪಾಚಿ ಇರುತ್ತದೆ ಎಂದಾಗ ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ಉತ್ತರಿಸಿದರು.ಸ.ಪ.ಪೂ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಊಟಕ್ಕೆ ಕುಳಿತುಕೊಳ್ಳಲು ಜಾಗ ಸಾಲುತ್ತಾ ಇಲ್ಲ ಎಂದಾಗ ಬಿಇಒ ಲೇಪಾಕ್ಷಪ್ಪ ಪರಿಶೀಲಿಸುತ್ತೇವೆ ಎಂದರು.
ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವಾಗ ಪೊಲೀಸ್ ವೆರಿಫಿಕೇಶನ್ ಆಗಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬಿ ಸೂಚಿಸಿದರು.
ಮಕ್ಕಳು ತಮ್ಮ ಏನೇ ಸಮಸ್ಯೆಗಳಿದ್ದರೆ 1098ಕ್ಕೆ ಕರೆ ಮಾಡಿ ತಿಳಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬಿ ಮಕ್ಕಳಿಗೆ ಸಲಹೆ ನೀಡಿದರು.