ಹಾವೇರಿಯಲ್ಲಿ ಜನಮನ ಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

KannadaprabhaNewsNetwork |  
Published : Nov 02, 2026, 03:15 AM IST
ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳ ನೃತ್ಯರೂಪಕ ಗಮನ ಸೆಳೆಯಿತು. | Kannada Prabha

ಸಾರಾಂಶ

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಕನ್ನಡ ನಾಡು, ನುಡಿ, ಜಲ, ಭಾಷೆ, ಉಡುಗೆ ತೊಡುಗೆಗಳನ್ನು ಪರಿಚಯಿಸುವ ನೃತ್ಯರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆ ಮಾಡಿದವು.

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಕನ್ನಡ ನಾಡು, ನುಡಿ, ಜಲ, ಭಾಷೆ, ಉಡುಗೆ ತೊಡುಗೆಗಳನ್ನು ಪರಿಚಯಿಸುವ ನೃತ್ಯರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆ ಮಾಡಿದವು.

ನಗರದ ಎಸ್‌ಎಂಎಸ್ ಹೈಸ್ಕೂಲ್, ವಿಝಡಂ ಶಾಲೆ, ನವ ಚೈತನ್ಯ ಶಾಲೆ, ವಿದ್ಯಾದಾಯಿನಿ ಪಬ್ಲಿಕ್ ಶಾಲೆ, ಸೇಂಟ್ ಆ್ಯನ್ಸ್ ಶಾಲೆಯ ತಲಾ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ನೃತ್ಯರೂಪಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವಯುತವಾಗಿ ನಡೆದವು. ಬಾರಿಸು ಕನ್ನಡ ಡಿಂಡಿಮವ, ನಾವಾಡುವ ನುಡಿಯೇ ಕನ್ನಡ ನುಡಿ, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ..., ಜೀವ ಕನ್ನಡ, ದೇಹ ಕನ್ನಡ..., ಕರುನಾಡೇ ಕೈಬೀಸಿದೆ ನೋಡೆ..., ಹುಟ್ಟಿದರೇ ಕನ್ನಡನಾಡಲಿ ಹುಟ್ಟಬೇಕು ಎಂಬ ನಾಡು-ನುಡಿ ಶ್ರೀಮಂತಿಕೆ ಬಿಂಬಿಸುವ ಕನ್ನಡ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

ಶಿಸ್ತುಬದ್ಧ ಪಥಸಂಚಲನ: ಪೊಲೀಸ್ ಇಲಾಖೆ ಮಹದೇವ ಅಥಣಿ ಅವರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರೀಕ ಪೊಲೀಸ್, ಅಗ್ನಿಶಾಮಕ, ಅರಣ್ಯ ರಕ್ಷಕ ಪಡೆ, ಗೃಹ ರಕ್ಷಕದಳ, ಜೆ.ಪಿ.ರೋಟರಿ ಕನ್ನಡ ಮಾಧ್ಯಮ ಪ್ರೌಢಶಾಲೆ, ಕೆ.ಎಲ್‌ಇ ಪ್ರೌಢಶಾಲೆ, ಕಾಳಿದಾಸ ಪ್ರೌಢಶಾಲೆ, ಸರಕಾರಿ ಉರ್ದು ಪ್ರೌಢಶಾಲೆ, ಬಸವಭಾರತಿ ಪ್ರೌಢಶಾಲೆ, ಆದರ್ಶ ಪ್ರೌಢಶಾಲೆ ಹಾಗೂ ಸರಕಾರಿ ಕನ್ನಡ ಪ್ರೌಢಶಾಲೆಗಳು ಸೇರಿದಂತೆ ಒಟ್ಟು 12 ತಂಡಗಳಿಂದ ಶಿಸ್ತುಬದ್ಧ ಪಥಸಂಚಲನ ಹಾಗೂ ಸಚಿವರಿಂದ ಪಥ ಪರಿವೀಕ್ಷಣೆ ಜರುಗಿತು. ಪೊಲೀಸ್ ವಾದ್ಯವೃಂದದವರು ಸುಶ್ರಾವ್ಯವಾಗಿ ಬ್ಯಾಂಡ್‌ಸೆಟ್ ನುಡಿಸಿದರು.

ಭಾವಚಿತ್ರ ಮೆರವಣಿಗೆಗೆ ಚಾಲನೆ: ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಿಂದ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು. ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಭುವನೇಶ್ವರಿ ರಥದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿದವು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಸ್ಥಬ್ದಚಿತ್ರಗಳು: ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದಿಂದ ರಸ್ತೆ ಬದಿಯ ನಡುತೋಪುಗಳ ಸೌಂದರ್ಯೀಕರಣ, ಆರೋಗ್ಯ ಇಲಾಖೆಯಿಂದ ವಿವಿಧ ಯೋಜನೆಗಳು, ಮೀನುಗಾರಿಕೆ ಇಲಾಖೆಯಿಂದಲೂ ವಿವಿಧ ಯೋಜನೆಗಳು, ತೋಟಗಾರಿಕೆ ಇಲಾಖೆಯ ಸ್ತಬ್ಧಚಿತ್ರದಲ್ಲಿ ತೋಟಗಾರಿಕೆ ಬೆಳೆಗಳ ಮಹತ್ವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪಂಚ ಗ್ಯಾರಂಟಿಗಳು, ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಗ್ರಾಮಿಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೀರಿನ ಯೋಜನೆಗಳು, ವಾ.ಕ.ರ.ಸಾ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ಮಯೂರವರ್ಮ ಅವರ ಐತಿಹಾಸಿಕ ಚಿತ್ರಣವನ್ನು ಅನಾವರಣಗೊಳಿಸಿದ್ದು ಗಮನಸೆಳೆಯಿತು.

ಸಾಧಕರಿಗೆ ಸನ್ಮಾನ: ಜಾನಪದ ಸಂಗೀತ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಪರಶುರಾಮ ಬಣಕಾರ, ಶಿವಕುಮಾರ ಜಾಧವ, ಕಾಶಾಚಾರಿ ಬಡಿಗೇರ, ನಿಂಗಾಚಾರಿ ಬಡಿಗೇರ, ಮಹೇಶ ಕಾಯಕದ, ರೇವಣಸಿದ್ಧಪ್ಪ ಪೂಜಾರ, ಗುರುಮಹಾಂತಯ್ಯ ಆರಾಧ್ಯಮಠ, ಗೀತಾಬಾಯಿ ಲಮಾಣಿ, ಗಂಗಪ್ಪ ಪುಟ್ಟಪ್ಪಳವರ, ಶಿವಪ್ಪ ಅಳವಂಡಿ, ಶಿವಾಜಿ ಬಾರ್ಕಿ, ಮಾಂತೇಶ ದಂಡಿನ, ನಾಗನಗೌಡ ಪಾಟೀಲ, ಶ್ರಾವಣಿ ಕೊಟ್ರಣ್ಣನವರ, ಮಾರುತಿ ತಳವಾರ, ಡಾ. ಜಗದೀಶ ಹೊಸಮನಿ, ಸಂತೋಷ ಬಿದರಗಡ್ಡೆ, ಶರಣಯ್ಯ ಹಿರೇಮಠ, ಶಿವರಾಜ ಅರಳಿ, ಕೆ.ಎಚ್. ಕುಂಬಾರ, ಸಿಸ್ಟರ್ ಅನಿತಾ ಡಿಸೋಜಾ, ನಾಗಪ್ಪ ಬೆಂತೂರ, ವಿಜಯಲಕ್ಷ್ಮಿ ಮುಂದಿನಮನಿ, ಮಂಜುನಾಥ ವಡವಿ, ಸಿ.ಎಂ. ಪೂಜಾರ, ಮುತ್ತುರಾಜ ಮಾದರ, ಫಕ್ಕೀರೇಶ ಹುರುಳಿಕುಪ್ಪಿ, ಪ್ರೀತಂ ವಡವಿ, ಗೌರಿ ಹಿರೇಮಠ, ಪೂರ್ವಿಕಾ ಹಿರೇಮಠ ಹಾಗೂ ಸುಚಿತ್ರಾ ಜಾಲಿ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ