ಧಾರವಾಡದಲ್ಲಿ ಅರ್ಥಪೂರ್ಣ 71ನೇ ರಾಜ್ಯೋತ್ಸವ

KannadaprabhaNewsNetwork |  
Published : Nov 02, 2026, 03:00 AM IST
 | Kannada Prabha

ಸಾರಾಂಶ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಹಾಗೂ ಬೆಳೆ ಹಾನಿ ಪರಿಹಾರವಾಗಿ ಸಾವಿರಾರು ರೈತರಿಗೆ ಕೋಟ್ಯಂತರ ರೂ. ಮೊತ್ತವನ್ನು ನೇರವಾಗಿ ಜಮೆ ಮಾಡಲಾಗಿದೆ

ಧಾರವಾಡ: 71ನೇ ಕನ್ನಡ ರಾಜ್ಯೋತ್ಸವ ಭಾನುವಾರ ಧಾರವಾಡದಲ್ಲಿ ಅರ್ಥಪೂರ್ಣವಾಗಿ ಜರುಗಿತು.

ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು ಹಾಗೂ ಪಾಟೀಲ ಪುಟ್ಟಪ್ಪನವರಂತಹ ಕನ್ನಡ ಕಟ್ಟಿದ ಧುರೀಣರ ಕೊಡುಗೆಯನ್ನು ಕನ್ನಡಿಗರು ಎಂದೆಂದಿಗೂ ಮರೆಯಬಾರದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ತಿಳಿಸಿದರು.

ನಗರದ ಆರ್‌.ಎನ್‌ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 71ನೇ ಕರ್ನಾಟಕ ರಾಜ್ಯೋತ್ಸವದ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ದಳಗಳಿಂದ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವಿದ್ದು, ಪಂಪನ ಕಾವ್ಯ, ವಚನಕಾರರ ಸಂದೇಶಗಳು, ದಾಸರ ಪದಗಳು ಹಾಗೂ ಕುವೆಂಪು ಅವರ ವಿಶ್ವಮಾನವ ಸಂದೇಶ ನಮ್ಮ ಭಾಷೆಯ ವಿಶಾಲತೆಯನ್ನು ಸಾರುತ್ತವೆ ಎಂದರು.

ಧಾರವಾಡ ಜಿಲ್ಲೆಯ ಸಂಗೀತ ದಿಗ್ಗಜರಾದ ಪಂಡಿತ್ ಭೀಮಸೇನ ಜೋಶಿ, ವರಕವಿ ದ.ರಾ. ಬೇಂದ್ರೆ, ಚನ್ನವೀರ ಕಣವಿ ಮತ್ತು ಮಲ್ಲಿಕಾರ್ಜುನ ಮನ್ಸೂರ್ ಅವರಂತಹ ಮಹಾನ್ ಸಾಧಕರು ನಾಡಿನ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ್ದಾರೆ ಎಂದು ಸ್ಮರಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿವರಿಸಿದ ಸಚಿವರು, ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 45 ಕೋಟಿ ಮಹಿಳಾ ಪ್ರಯಾಣಿಕರಿಗೆ ರು. 995 ಕೋಟಿ ಉಚಿತ ಸೇವೆ, ಗೃಹಲಕ್ಷ್ಮಿ ಯೋಜನೆಯಡಿ 4,04,827 ಮಹಿಳೆಯರಿಗೆ ರು. 2,345 ಕೋಟಿ ನೆರವು ಹಾಗೂ ಗೃಹಜ್ಯೋತಿ ಯೋಜನೆಯಡಿ 5,21,046 ಕುಟುಂಬಗಳಿಗೆ ರು. 846 ಕೋಟಿ ಸಹಾಯಧನ ನೀಡಲಾಗಿದೆ ಎಂದರು. ಅನ್ನಭಾಗ್ಯ ಯೋಜನೆಯಡಿ 3,75,996 ಬಿಪಿಎಲ್ ಕುಟುಂಬಗಳಿಗೆ ಪಡಿತರ ಹಾಗೂ ಯುವನಿಧಿ ಯೋಜನೆಯಡಿ 12,340 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಹಾಗೂ ಬೆಳೆ ಹಾನಿ ಪರಿಹಾರವಾಗಿ ಸಾವಿರಾರು ರೈತರಿಗೆ ಕೋಟ್ಯಂತರ ರೂ. ಮೊತ್ತವನ್ನು ನೇರವಾಗಿ ಜಮೆ ಮಾಡಲಾಗಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಚಲನಚಿತ್ರ-ಕಿರುತೆರೆ ಕ್ಷೇತ್ರದ ಕೆ. ವೆಂಕಟರಮಣ (ಬಾಬಜಿ) ಹಾಗೂ ರಂಗಭೂಮಿ ಕ್ಷೇತ್ರದ ಕೆ. ವಿಜಯಲಕ್ಷ್ಮೀ ಪಾಟೀಲ ಅವರಿಗೆ ಸಚಿವರು ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.

ಪಥಸಂಚಲನ ಮತ್ತು ಪ್ರಶಸ್ತಿಗಳು: ವಿವಿಧ ಪೊಲೀಸ್ ತುಕಳಿಗಳು, ಎನ್‌ಸಿಸಿ ಹಾಗೂ ಸ್ಕೌಟ್ಸ್-ಗೈಡ್ಸ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಕಾಯ್ದಳಗಳು ಆಕರ್ಷಕ ಪಥಸಂಚಲನ ನಡೆಸಿದವು. ಟ್ರೇನ್ಡ್ ವಿಭಾಗದಲ್ಲಿ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ಪ್ರಥಮ ಸ್ಥಾನ ಪಡೆದರೆ, ಅನ್‌ಟ್ರೇನ್ಡ್ ವಿಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆ (ತಿಮ್ಮಾಪೂರ) ಪ್ರಥಮ ಸ್ಥಾನ ಗಳಿಸಿತು. ವಿದ್ಯಾರ್ಥಿಗಳು ಮತ್ತು ವಿವಿಧ ವಸತಿ ನಿಲಯದ ಕಲಾತಂಡಗಳಿಂದ ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸಚಿವ ಸಂತೋಷ್ ಲಾಡ್ ಅವರೊಂದಿಗೆ ಉತ್ಸಾಹದಿಂದ ಮಾತನಾಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಮಹಾನಗರ ಪೊಲೀಸ್ ಆಯುಕ್ತ ಬೋರಸೆ ಭೂಷಣ್ ಗುಲಾಬರಾವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಎಸ್‌ಪಿ ಗುಂಜನ ಆರ್ಯ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸುವ ‘ಗ್ರಾಮಾನುಭವ’ಕ್ಕೆ ಚಾಲನೆ
ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ: ರಿಝ್ವಾನ್ ಅರ್ಷದ್