ಕಬ್ಬು ರೈತರ ಹೋರಾಟಕ್ಕೆ ನಮ್ಮ ಬೆಂಬಲ- ಸಂತೋಷ ಲಾಡ್‌

KannadaprabhaNewsNetwork |  
Published : Nov 02, 2026, 03:00 AM IST
 | Kannada Prabha

ಸಾರಾಂಶ

ಕಬ್ಬು ಬೆಳೆಗಾರರ ಸದ್ಯದ ಸ್ಥಿತಿಗೆ ಹಾಗೂ ಸಕ್ಕರೆ ಕಾರ್ಖಾನೆಗಳ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರದ ನೀತಿಗಳೇ ನೇರ ಕಾರಣ

ಧಾರವಾಡ: ರಾಜ್ಯ ಸರ್ಕಾರ ಹಾಗೂ ನಮ್ಮ ಸಚಿವರು ಸದಾ ಕಬ್ಬು ಬೆಳೆಗಾರರು ಮತ್ತು ಹೋರಾಟಗಾರರ ಪರವಾಗಿ ಇರುತ್ತೇವೆ. ಆದರೆ ಈ ಸಮಸ್ಯೆಗೆ ಶಾಶ್ವತ ಕಡಿವಾಣ ಹಾಕಬೇಕೆಂದರೆ ಇದರ ಮೂಲ ಬೇರಿಗೆ ಹೋಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದಲ್ಲಿ ಕಬ್ಬು ಬೆಳೆಗಾರರ ಹೋರಾಟದ ಕುರಿತು ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸದ್ಯದ ಸ್ಥಿತಿಗೆ ಹಾಗೂ ಸಕ್ಕರೆ ಕಾರ್ಖಾನೆಗಳ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರದ ನೀತಿಗಳೇ ನೇರ ಕಾರಣ ಎಂದು ಆಕ್ರೋಶ ಹೊರಹಾಕಿದರು.

ಕೇಂದ್ರದ ನೀತಿಗೆ ಆಕ್ಷೇಪ: ದೇಶದಲ್ಲಿ ವರ್ಷಕ್ಕೆ ಸುಮಾರು 6 ಸಾವಿರ ಕೋಟಿ ಲೀಟರ್ ನಷ್ಟು ಪೆಟ್ರೋಲ್ ಖರ್ಚಾಗುತ್ತಿದೆ. ಈ ಪೆಟ್ರೋಲ್‌ಗೆ ಶೇಕಡಾ 20ರಷ್ಟು ಎಥೆನಾಲ್ ಮಿಕ್ಸ್ ಮಾಡಲಾಗುತ್ತದೆ. ಈ ಎಥೆನಾಲ್ ಸಕ್ಕರೆ ಕಾರ್ಖಾನೆಗಳಲ್ಲೇ ತಯಾರಾಗುತ್ತದೆ. ಕೇಂದ್ರ ಸರ್ಕಾರವೇ ಎಥೆನಾಲ್ ಉತ್ಪಾದನೆ ಮಾಡಿ ಎಂದು ಹೇಳುತ್ತದೆ ಹಾಗೂ ಎಥೆನಾಲ್ ಪ್ಲ್ಯಾಂಟ್, ಶುಗರ್ ಪ್ಲ್ಯಾಂಟ್‌ಗಳಿಗೆ ಅನುಮತಿ ನೀಡುತ್ತದೆ. ಅಷ್ಟೇ ಅಲ್ಲದೆ, ಕಬ್ಬಿಗೆ ಎಫ್‌ಆರ್‌ಪಿ ನಿಗದಿಪಡಿಸುವುದು ಸಹ ಕೇಂದ್ರ ಸರ್ಕಾರವೇ ಎಂದರು.

ಉತ್ತರ ಪ್ರದೇಶ, ಗುಜರಾತ್‌ನಂತಹ ರಾಜ್ಯಗಳಿಗೆ ಹೆಚ್ಚಿನ ಕೋಟಾ ನೀಡಲಾಗುತ್ತಿದೆ. ಆದರೆ ಕರ್ನಾಟಕಕ್ಕೆ ಕೋಟಾ ಕಡಿಮೆ ನೀಡಲಾಗುತ್ತಿದೆ. ಎಲ್ಲಿ ಪ್ಲ್ಯಾಂಟ್‌ಗಳು ಕಡಿಮೆಯಿವೆಯೋ ಅಲ್ಲಿಗೆ ಹೆಚ್ಚಿನ ಕೋಟಾ ಕೊಡುವ ವಿಚಿತ್ರ ನೀತಿ ಕೇಂದ್ರದಲ್ಲಿದೆ. ಸಕ್ಕರೆ ಕ್ಷೇತ್ರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ " ಎಂದರು.

ಲಾಭ ಕೇಂದ್ರಕ್ಕೆ, ನಷ್ಟ ರೈತರಿಗೆ: ಸಕ್ಕರೆ ಕಾರ್ಖಾನೆಗಳಿಂದ ಕೇಂದ್ರ ಸರ್ಕಾರ ಎಥೆನಾಲ್ ಅನ್ನು ಕೇವಲ 55 ರೂಪಾಯಿಗೆ ಖರೀದಿ ಮಾಡಿ, ಮಾರುಕಟ್ಟೆಯಲ್ಲಿ 110 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅದರಲ್ಲಿ ಬರುವ ಲಾಭದಲ್ಲಿ ಕೇವಲ 4 ರೂಪಾಯಿಯನ್ನು ರೈತರಿಗೆ ನೀಡಿದರೆ ಅವರು ನೆಮ್ಮದಿಯಿಂದ ಬದುಕುತ್ತಾರೆ. ಪ್ರಸ್ತುತ ಹೊಲಗಳಲ್ಲಿ ಕಬ್ಬು ಒಣಗುತ್ತಿದ್ದು, ರೈತರಿಗೆ ಸೂಕ್ತ ಬೆಲೆ ನಿಗದಿಯಾಗುವವರೆಗೂ ಅವರ ಹೋರಾಟ ನಡೆಯಲಿ. ರೈತರ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ, " ಎಂದು ಬೆಂಬಲ ಸೂಚಿಸಿದರು.

ಬ್ರೆಜಿಲ್‌ನಿಂದ ಸಕ್ಕರೆ ಆಮದಿಗೆ ಆಕ್ರೋಶ: ಒಂದೆಡೆ ದೇಶದ ರೈತರು ಸಂಕಷ್ಟದಲ್ಲಿದ್ದರೆ, ಇನ್ನೊಂದೆಡೆ ಬ್ರೆಜಿಲ್‌ನಿಂದ 10 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ಕೇಳುವವರೂ ಇಲ್ಲ, ಹೇಳುವವರೂ ಇಲ್ಲದಂತಾಗಿದೆ. ಕಳೆದ 12 ವರ್ಷಗಳಿಂದ ಆಗುತ್ತಿರುವ ಬೆಲೆ ಏರಿಕೆ ಹಾಗೂ ರೈತರ ಮೇಲಿನ ಅನ್ಯಾಯದ ಬಗ್ಗೆ ಕೇಂದ್ರವನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದು ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸ: ಚಂದ್ರಶೇಖರ ಗಾಳಿ
ಧಾರವಾಡದಲ್ಲಿ ಅರ್ಥಪೂರ್ಣ 71ನೇ ರಾಜ್ಯೋತ್ಸವ