
ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಅಂಗಸಂಸ್ಥೆಯಾದ ಇಲ್ಲಿಯ ಡಾ.ಬಿ. ಡಿ. ಜತ್ತಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರದ ವತಿಯಿಂದ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭ ಸಂಸ್ಥೆಯ ಆವರಣದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪ್ರಾಂಗಣದಲ್ಲಿ ಆಯೋಜಿಸಲಾಗಿತ್ತು.
ಇದಲ್ಲದೆ, ವಿಶ್ವವಿದ್ಯಾಲಯದ ರ‍್ಯಾಂಕ್ ಪಟ್ಟಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 20 ರ‍್ಯಾಂಕ್‌ಗಳನ್ನು ಗಳಿಸಿದ್ದು, ಸ್ನಾತಕ ವಿಭಾಗದ ವಿದ್ಯಾರ್ಥಿಗಳು 19 ರ‍್ಯಾಂಕ್‌ಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಮಥುರಾ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಡಾ. ಮಹಾದೇವ ಬಿ. ಚೆಟ್ಟಿ ಉದ್ಘಾಟಿಸಿ, ವೈದ್ಯಕೀಯ ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಮಾನವೀಯ ಮೌಲ್ಯಗಳು, ಸೇವಾ ಮನೋಭಾವ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಳೆಸುವಂತಿರಬೇಕು. ವೈದ್ಯರು ರೋಗಿಗಳ ನೋವು ಮತ್ತು ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಬೇಕು. ವೈದ್ಯಕೀಯ ವೃತ್ತಿಯಲ್ಲಿ ನಿರಂತರ ಅಧ್ಯಯನ, ಸಂಶೋಧನೆ ಮತ್ತು ನೈತಿಕ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.ಮುಖ್ಯ ಭಾಷಣಕಾರ ಬೆಳಗಾವಿಯ ಕೆಎಲ್‌ಇ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿರ್ದೇಶಕ ಡಾ. ಎಂ.ಎ. ಉಡಚಣಕರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಜ್ಞಾನಾರ್ಜನೆ, ವೃತ್ತಿಪರ ಕೌಶಲ್ಯ, ಶಿಸ್ತು ಮತ್ತು ರೋಗಿಗಳೊಂದಿಗಿನ ಉತ್ತಮ ಸಂಬಂಧ ಅತ್ಯಂತ ಮುಖ್ಯ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಿಂದ ಪಡೆದ ಜ್ಞಾನವನ್ನು ಸಮಾಜದ ಆರೋಗ್ಯ ಸುಧಾರಣೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಧಾರವಾಡ ಅಧ್ಯಕ್ಷ ರಾಘವೇಂದ್ರ ತವನಪ್ಪನವರ ಅಧ್ಯಕ್ಷತೆ ವಹಿಸಿದ್ದರು.