71ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನಕಗಿರಿ ತಾಲೂಕು ಆಡಳಿತದಿಂದ ಭಾನುವಾರ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ನಡೆಯಿತು. ತಹಸೀಲ್ದಾರ್ ಚಂದ್ರಶೇಖರ ಗಾಳಿ ಚಾಲನೆ ನೀಡಿದರು.
ಕನಕಗಿರಿ: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದರು.
ತಾಲೂಕು ಆಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡ ಎಲ್ಲ ಭಾಷೆಗಳಿಗಿಂತ ವಿಭಿನ್ನವಾಗಿದೆ. ಕನ್ನಡ ವೈಜ್ಞಾನಿಕ ಭಾಷೆಯಾಗಿದ್ದು, ಕನ್ನಡ ಭಾಷೆಯ ರುಚಿ ಅನ್ಯ ಭಾಷೆಗಳು ಕೊಡುವುದಿಲ್ಲ. ಮೇಲಾಗಿ ಕನ್ನಡ ಕಲಿತು ಸಾಹಿತ್ಯ ರೂಪಕವಾಗಿ ಹೊರ ಬರುವ ಪದಗಳಿಂದ ಮನ ಉಲ್ಲಾಸ ನೀಡಲಿದೆ. ಅದಕ್ಕಾಗಿ ಕನ್ನಡಿಗರು ಕನ್ನಡದ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಇಂತಹ ಇತಿಹಾಸವಿರುವ ಕನ್ನಡಕ್ಕೆ ದೇಶದಲ್ಲಿ ಒಳ್ಳೆಯ ಸ್ಥಾನವಿದೆ. ಕೇಂದ್ರ ಸರ್ಕಾರ ವ್ಯಾಪ್ತಿಯ ಬ್ಯಾಂಕ್ಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗುತ್ತಿದೆ. ಹೀಗೆ ಕನ್ನಡಿಗರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸೌಲಭ್ಯಗಳು ಕಲ್ಪಿಸುವ ಕೆಲಸ ಆಗುತ್ತಿದೆ ಎಂದರು.ಕರವೇ ತಾಲೂಕು ಘಟಕದ ಅಧ್ಯಕ್ಷ ಹರೀಶ್ ಪೂಜಾರ ಮಾತನಾಡಿ, ಐಟಿ-ಬಿಟಿ ಕಂಪನಿಗಳು ಕನ್ನಡಿಗರಿಗೆ ಕೆಲಸ ನೀಡದೆ ಅನ್ಯಾಯ ಮಾಡುತ್ತಿವೆ. ಬೆಂಗಳೂರಿನ ಐಟಿ-ಬಿಟಿ ಕಂಪನಿಗಳು ಎಚ್ಚೆತ್ತುಕೊಂಡು ಕನ್ನಡಿಗರಿಗೆ ನೌಕರಿ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದ ತೇರಿನ ಹನುಮಪ್ಪ ದೇವಸ್ಥಾನದಿಂದ ಆರಂಭಗೊಂಡ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಶ್ರೀ ಕನಕಾಚಲಪತಿ ಮಂದಿರದ ವರೆಗೆ ನಡೆಯಿತು. ಸಿದ್ದಾಪುರದ ಹಗಲು ವೇಷಗಾರರ ನೃತ್ಯ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಕನ್ನಡಾಂಬೆಯ ಘೋಷಣೆ ಮೊಳಗಿದವು.ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಅನಿಲಕುಮಾರ ಬಿಜ್ಜಳ, ಸುರೇಶ ಗುಗ್ಗಳಶೆಟ್ರ, ಶೇಷಪ್ಪ ಪೂಜಾರ, ಪ್ರಮುಖರಾದ ಶರಣಪ್ಪ ಪಲ್ಲವಿ, ಬಸವರಾಜ ಕೋರಿ, ವೀರಭದ್ರಪ್ಪ, ಗ್ರಾಮ ಆಡಳಿತ ಅಧಿಕಾರಿಗಳಾದ ಶಿವರಾಜ ಭೋವಿ, ಅಮರ ತೆಗ್ಗಿನಮನಿ ಇದ್ದರು.