ಸೈಬರ್ ವಂಚನೆ ಹಣಕ್ಕೆ ಹುಬ್ಬಳ್ಳಿಯ ಐದು ಬ್ಯಾಂಕ್‌ಗಳ ಬಳಕೆ!

KannadaprabhaNewsNetwork |  
Published : Nov 02, 2026, 03:00 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ದೇಶಾದ್ಯಂತ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಹಣದ ವಹಿವಾಟು ಪತ್ತೆಹಚ್ಚಲು ಪೊಲೀಸ್ ಇಲಾಖೆ ಕೈಗೊಂಡಿರುವ "ಆಪರೇಷನ್ ಸೈಬರ್ ಶೀಲ್ಡ್ " ಕಾರ್ಯಾಚರಣೆಯಲ್ಲಿ ಈ ಅಕ್ರಮ ವಹಿವಾಟು ಪತ್ತೆಯಾಗಿದೆ.

ಹುಬ್ಬಳ್ಳಿ: ದೇಶದ ವಿವಿಧೆಡೆ ಸಾರ್ವಜನಿಕರನ್ನು ವಂಚಿಸಿ ಸೈಬರ್ ಅಪರಾಧಗಳ ಮೂಲಕ ಲೂಟಿ ಮಾಡಲಾದ ಹಣವನ್ನು ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಐದು ಬ್ಯಾಂಕ್‌ಗಳ ಖಾತೆಗಳ ಮೂಲಕ ಚೆಕ್‌ಗಳ ಮುಖಾಂತರ ನಗದೀಕರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 31 ಅನುಮಾನಾಸ್ಪದ ಚೆಕ್‌ಗಳ ಮೂಲಕ ಹತ್ತಾರು ಕೋಟಿ ರುಪಾಯಿ ಹಣ ಹಿಂಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇಶಾದ್ಯಂತ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಹಣದ ವಹಿವಾಟು ಪತ್ತೆಹಚ್ಚಲು ಪೊಲೀಸ್ ಇಲಾಖೆ ಕೈಗೊಂಡಿರುವ "ಆಪರೇಷನ್ ಸೈಬರ್ ಶೀಲ್ಡ್ " ಕಾರ್ಯಾಚರಣೆಯಲ್ಲಿ ಈ ಅಕ್ರಮ ವಹಿವಾಟು ಪತ್ತೆಯಾಗಿದೆ. ಬೆಂಗಳೂರಿನ ಸೈಬರ್ ಅಪರಾಧ ನಿಯಂತ್ರಣ ಘಟಕ ನಡೆಸಿದ ಪರಿಶೀಲನೆಯಲ್ಲಿ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಬ್ಯಾಂಕ್ ಖಾತೆಗಳ ಮೂಲಕ ಅನುಮಾನಾಸ್ಪದ ಹಣದ ವಹಿವಾಟು ನಡೆದಿರುವುದು ಗೊತ್ತಾಗಿದೆ.

ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ಖಾತೆಗಳಲ್ಲಿ ವಹಿವಾಟು ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. 2025ರ ಜ. 8ರಿಂದ 2026ರ ಆ. 3ರ ವರೆಗೆ ಒಟ್ಟು 31 ಬಾರಿ ಚೆಕ್‌ಗಳ ಮೂಲಕ ಹಣ ಹಿಂಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೈಬರ್ ವಂಚನೆಗೆ ಒಳಗಾದ ಸಾರ್ವಜನಿಕರ ಹಣವೇ ಈ ಖಾತೆಗಳಿಗೆ ವರ್ಗಾವಣೆಯಾಗಿದ್ದು, ಬಳಿಕ ಚೆಕ್‌ಗಳ ಮೂಲಕ ನಗದೀಕರಿಸಲಾಗಿದೆ ಎನ್ನಲಾಗಿದೆ. ವಂಚನೆಯ ಹಣ ತಮ್ಮ ಖಾತೆಗಳಿಗೆ ಜಮೆಯಾಗಿರುವುದು ತಿಳಿದಿದ್ದರೂ ಖಾತೆದಾರರು ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿ ಹಣ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಮಧ್ಯವರ್ತಿಗಳ ನೆರವಿನಿಂದ ಹಣ ನಗದೀಕರಿಸಿಕೊಂಡು ಸ್ವಂತ ಲಾಭಕ್ಕೆ ಬಳಸಿಕೊಂಡಿರುವ ಸಾಧ್ಯತೆಯ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಖಾತೆಗಳ ವಹಿವಾಟಿನ ಪರಿಶೀಲನೆ: ಅಕ್ರಮ ಹಣದ ವಹಿವಾಟಿನಲ್ಲಿ ಭಾಗಿಯಾಗಿರುವ ಖಾತೆದಾರರು ಹಾಗೂ ಶಂಕಿತ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹಣದ ಮೂಲ, ಯಾವ ಖಾತೆಗಳಿಗೆ ವರ್ಗಾವಣೆಯಾಗಿದೆ, ಚೆಕ್‌ಗಳನ್ನು ಸಲ್ಲಿಸಿದವರು ಯಾರು, ಹಣವನ್ನು ಪಡೆದವರು ಯಾರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್ ಖಾತೆಗಳ ಸಂಪೂರ್ಣ ವಹಿವಾಟಿನ ವಿವರ, ಚೆಕ್‌ಗಳ ಪ್ರತಿಗಳು ಹಾಗೂ ಹಣದ ವರ್ಗಾವಣೆಯ ಜಾಲದ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಪಂ, ತಾಪಂ ಎಲೆಕ್ಷನ್‌ಗೆ ಎಸ್‌ಐಆರ್‌ ಮತಪಟ್ಟಿ ಇಲ್ಲ? - ಹಳೆ ಪಟ್ಟಿ ಬಳಕೆ: ಖಂಡ್ರೆ
ಹಾಲು, ಮೊಸರು ಆಯ್ತು, ಇದೀಗ ಬಸ್‌ ದರ ಏರಿಕೆ - ನ.5ರಿಂದಲೇ ಹೊಸ ದರ