ಉಡುಪಿ: ಕರಾವಳಿ ನಿರ್ದಿಗಂತಕ್ಕೆ ಚಾಲನೆ

KannadaprabhaNewsNetwork |  
Published : Jan 10, 2026, 03:00 AM IST
32 | Kannada Prabha

ಸಾರಾಂಶ

ಕರಾವಳಿ ನಿರ್ದಿಗಂತ ವತಿಯಿಂದ ಜ. 18ರಿಂದ 21ರವರೆಗೆ ಮಕ್ಕಳ ನಾಟಕ ಪ್ರದರ್ಶನವನ್ನು ಆಯೋಜಿಸುತ್ತಿದೆ ಎಂದು ಖ್ಯಾತ ನಟ ಪ್ರಕಾಶ್‌ ರಾಜ್ ಹೇಳಿದ್ದಾರೆ.

ಉಡುಪಿ: ಎರಡು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಆರಂಭವಾದ ನಿರ್ದಿಗಂತ ಈಗ ಕರಾವಳಿಗೂ ವಿಸ್ತರಿಸಿದ್ದು, ಕರಾವಳಿ ನಿರ್ದಿಗಂತ ವತಿಯಿಂದ ಜ. 18ರಿಂದ 21ರವರೆಗೆ ಮಕ್ಕಳ ನಾಟಕ ಪ್ರದರ್ಶನವನ್ನು ಆಯೋಜಿಸುತ್ತಿದೆ ಎಂದು ಖ್ಯಾತ ನಟ ಪ್ರಕಾಶ್‌ ರಾಜ್ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಂಗಭೂಮಿಯ ಕಾವುಗೂಡಾಗಿ ಆರಂಭವಾದ ನಿರ್ದಿಗಂತವು, ಇದೀಗ ಕರಾವಳಿಯ ಪ್ರತಿಭೆಗಳಿಗೆ ವೇದಿಕೆಯಾಗುವ ಪ್ರಯತ್ನವಾಗಿದೆ. ಕರಾವಳಿಯ ಮಕ್ಕಳ ಶಿಬಿರಗಳನ್ನು, ಕಾಲೇಜು ವಿದ್ಯಾರ್ಥಿಗಳಿಗೆ ರಂಗಚಟುವಟಿಕೆಗಳನ್ನು ಹಾಗೂ ರಂಗ ಶಿಕ್ಷಕರ ಮತ್ತು ಸಂಘಟಕರ ಕಮ್ಮಟ ಇತ್ಯಾದಿ ರಂಗ ಸಂಬಂಧಿ ಕಾರ್ಯ ಮಾಡಲಿದೆ ಎಂದರು.

ಜ. 18ರಂದು ಬೆಳಗ್ಗೆ 10.30ರಿಂದ ಆರೂರು ಮೋರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಬಿಂದು ರಕ್ಷಿದಿ ಅವರು ನಿರ್ದೇಶನ- ವಿನ್ಯಾಸದಲ್ಲಿ ಮೃಗ ಮತ್ತು ಸುಂದರಿ, 12.30ರಿಂದ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ವರದರಾಜ್ ಬಿರ್ತಿ ರಚಿಸಿದ, ರೋಹಿತ್ ಬೈಕಾಡಿ ನಿರ್ದೇಶಿಸಿದ ವಿಜ್ಞಾನ ನಾಟಕ ಕ್ಯೂರಿಯಸ್, ಸಂಜೆ 7 ಗಂಟೆಯಿಂದ ಕರಾವಳಿ ನಿರ್ದಿಗಂತದಿಂದ ಎಚ್.ಎಸ್. ವೆಂಕಟೇಶಮೂರ್ತಿ ರಚಿಸಿದ, ರೋಹಿತ್ ಬೈಕಾಡಿ ನಿರ್ದೇಶಿಸಿದ ಕುಣಿ ಕುಣಿ ನವಿಲೇ ನಾಟಕ ಪ್ರದರ್ಶನಗೊಳ್ಳಲಿವೆ.

19ರಂದು ಸಂಜೆ 6.30ಕ್ಕೆ ಮಣಿಪಾಲ ಸಂಗಮ ಕಲಾವಿದೆರ್ ತಂಡದಿಂದ ಬೀಚಿ ಮತ್ತು ಶ್ರೀನಿವಾಸ ವೈದ್ಯರ ಲೇಖನಗಳಾಧಾರಿತ ರಮೇಶ್ ಕೆ. ಬೆಣಕಲ್ ನಿರ್ದೇಶನದಲ್ಲಿ ದೇವರ ಆತ್ಮಹತ್ಯೆ, 20ರಂದು ಸಂಜೆ 6.30ರಿಂದ ಕರಾವಳಿ ನಿರ್ದಿಂಗತದಿಂದ ಲೋಹಿಯಾ ಲೇಖನಾಧಾರಿತ ಗಣೇಶ್ ಮಂದರ್ತಿ ನಿರ್ದೇಶನದಲ್ಲಿ ರಾಮಕೃಷ್ಣ ಶಿವ, 21ರಂದು ಸಂಜೆ 6 ಗಂಟೆಗೆ ಪ್ರಕಾಶ್ ರಾಜ್ ಮತ್ತು ಸಂಗಡಿಗರಿಂದ ಸಮತೆಯ ಹಾಡು, 7.15ರಿಂದ ಕರಾವಳಿ ನಿರ್ದಿಂಗತದಿಂದ ದಾರಿಯೋ ಪೋ ನಾಟಕ ಆಧರಿತ ಶಕೀಲ್ ಅಹ್ಮದ್ ನಿರ್ದೇಶನದಲ್ಲಿ ಕೊಡಲ್ಲ ಅಂದ್ರೆ ಕೊಡಲ್ಲ ಪ್ರದರ್ಶನಗೊಳ್ಳಲಿದೆ.

18ರಂದು ಮಧ್ಯಾಹ್ನ 2.30ರಿಂದ ರಂಗಾಸಕ್ತ ಹಿರಿಯ ಶಿಕ್ಷಕರಿಂದ ನವ ಶಿಕ್ಷಕರಿಗಾಗಿ ಶೈಕ್ಷಣಿಕ ಕಮ್ಮಟ ನಡೆಲಿದೆ. 6.30ರಿಂದ ಕರಾವಳಿ ನಿರ್ದಿಗಂತವನ್ನು ಸಾಹಿತಿ, ಚಿಂತಕ ಪಕೀರ್ ಮಹಮ್ಮದ್ ಕಟ್ಪಾಡಿ ಉದ್ಘಾಟಿಸುವರು ಎಂದು ಪ್ರಕಾಶ್‌ ರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿಗಳಾದ ರಾಜು ಮಣಿಪಾಲ, ಗಣೇಶ್ ಮಂದಾರ್ತಿ, ಅನುಷ್ ಶೆಟ್ಟಿ, ಶಕೀಲ್ ಅಹಮದ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ