ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆ ಆವರಣದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಮಕ್ಕಳ ಸಂತೆ ಎಲ್ಲರ ಗಮನ ಸೆಳೆಯಿತು.ಶಾಲಾ ಮಕ್ಕಳು ನಾವು ದಿನನಿತ್ಯ ಬಳಸುವ ವಿವಿಧ ಬಗೆಯ ತರಕಾರಿ, ಸೊಪ್ಪು, ಹಣ್ಣು ಹಾಗೂ ಬಜ್ಜಿ, ಪಾನಿಪುರಿ, ಎಳನೀರು, ಟೀ, ಮದ್ದೂರು ವಡೆ, ನಿಪ್ಪಟ್ಟು, ಪ್ರೂಟ್ ಸಲಾಡ್, ತೆಂಗಿನಕಾಯಿ, ವಿವಿಧ ಬಗೆಯ ಸಿಹಿ ತಿಂಡಿ-ತಿನಿಸುಗಳನ್ನು, ‘10 ರುಪಾಯಿ ಗುಡ್ಡೆ’, ‘ತಾಜ ತರಕಾರಿ’, ‘ಬನ್ನಿ ಮನೆಗೆ ತಗೊಂಡು ಹೋಗಿ’ ಎಂದು ಮಾಮೂಲಿ ವ್ಯಾಪಾರಿಗಳಂತೆಯೇ ವ್ಯಾಪಾರ ಮಾಡುವ ಮೂಲಕ ತಮ್ಮ ಕೌಶಲ್ಯತೆಯನ್ನು ಮೆರೆದರು.
ಪೋಷಕರು ಹಾಗೂ ಸಾರ್ವಜನಿಕರು ತರಕಾರಿ, ಸೊಪ್ಪು, ಹಣ್ಣುಗಳನ್ನು ಸಂತೆಯಲ್ಲಿ ಖರೀದಿ ಮಾಡುವಂತೆಯೇ ಖರೀದಿಸಿ ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯುವ ಮೂಲಕ ಮಕ್ಕಳನ್ನು ಉತ್ತೇಜಿಸಿದರು.ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಪೇಗೌಡ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ವಿಶೇಷ ಚಟುವಟಿಕೆಗಳನ್ನು ಕಲಿಸುವ ಉದ್ದೇಶ ನಮ್ಮದಾಗಿದೆ.ಮಕ್ಕಳ ಸಂತೆ ಮೂಲಕ ಅವರಿಗೆ ವ್ಯವಹಾರಿಕ ಜ್ಞಾನದ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ವೇಳೆ ಚಿನಕುರಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಮಾಜಿ ಸದಸ್ಯ ಮೈಕ್ ಮಹದೇವು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಪತ್ರಕರ್ತರಾದ ಬಿ.ಎಸ್.ಜಯರಾಂ, ಎನ್.ಕೃಷ್ಣಗೌಡ, ಚನ್ನಮಾದೇಗೌಡ, ನಾಗಸುಂದ್ರ, ರವಿಕುಮಾರ್, ಗ್ರಾಮದ ಕೆಲವು ಮುಖಂಡರು, ಇತರರು ಉಪಸ್ಥಿತರಿದ್ದರು.ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ತಿಮ್ಮರಾಜು ಆಯ್ಕೆ
ಕನ್ನಡಪ್ರಭ ವಾರ್ತೆ ಹಲಗೂರುಸಮೀಪದ ನಿಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸರಗೂರು ಗ್ರಾಮದ ತಿಮ್ಮರಾಜು, ಉಪಾಧ್ಯಕ್ಷರಾಗಿ ಹೊಸದೊಡ್ಡಿ ಗ್ರಾಮದ ಕೆಂಪಾಜಮ್ಮ ಅವಿರೋಧವಾಗಿ ಆಯ್ಕೆಯಾದರು.
12 ಸದಸ್ಯ ಬಲದ ಸಂಘ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಿಮ್ಮರಾಜು ಮತ್ತು ಕೆಂಪಾಜಮ್ಮ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ರಾಮಕೃಷ್ಣ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ನೂತನ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಒಗ್ಗೂಡಿ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸಹಕಾರ ಇಲಾಖೆ ವತಿಯಿಂದ ಸಂಘದ ಸದಸ್ಯರಿಗೆ ದೊರಕುವ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಸಾಲ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದರು.ನಿರ್ದೇಶಕ ಜಗದೀಶ್ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಹಾಗೂ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ನಿರ್ದೇಶಕರಾದ ಮರಿಸ್ವಾಮಿ, ಎಸ್.ಎಂ.ಸುರೇಶ್, ಎಚ್.ಸಿ.ರಮೇಶ್, ಎಚ್.ಎಲ್.ಬಸವರಾಜು, ಕೆ.ಎಸ್.ಕೆಂಪೇಗೌಡ, ನಾರಾಯಣ, ವಿ.ಲಕ್ಷ್ಮೀ, ಕೆ.ಎಸ್.ಜಯರಾಮೇಗೌಡ, ಜಗದೀಶ್, ಮುಖಂಡರಾದ ಕುಂತೂರು ಗೋಪಾಲ್, ಸೋಮಶೇಖರ್, ಭೀಮರಾಜು, ಸತೀಶ್, ವೀರಭದ್ರಸ್ವಾಮಿ, ಚಿಕ್ಕಸಿದ್ದಯ್ಯ, ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.