ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಮಕ್ಕಳ ಸಂತೆ ಶೈಕ್ಷಣಿಕ ಕಾರ್ಯಕ್ರಮವು ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.ಶಾಲಾ ಪ್ರಾರ್ಥನಾ ಸಮಾವೇಶದ ಬಳಿಕ ವಿದ್ಯಾರ್ಥಿಗಳು ತಮ್ಮ ಬಯಲು ಮಳಿಗೆಗಳನ್ನು ತೆರೆದು ಅತ್ಯುತ್ಸಾಹದಿಂದ ವ್ಯಾಪಾರ ಆರಂಭಿಸಿದರು. ಅಷ್ಟೇ ಉತ್ಸಾಹದಿಂದ ಸದರಿಪ್ರಾಥಮಿಕ ಶಾಲೆಯ ಮತ್ತು ಪ್ರೌಢಶಾಲೆಯ ಹಾಗೂ ಪಕ್ಕದ ಹಾರೋಹಳ್ಳಿಗ್ರಾಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವ್ಯಾಪಾರದಲ್ಲಿ ತೊಡಗಿ ತಮಗಿಷ್ಟದ ವಸ್ತುಗಳನ್ನು ಖರೀದಿಸಿದರು.
ಮಕ್ಕಳ ಸಂತೆಯಲ್ಲಿ ವಿವಿಧ ರೀತಿಯ ಸೊಪ್ಪು, ತರಕಾರಿ, ಹಣ್ಣುಗಳು, ತಿಂಡಿ ತಿನಿಸುಗಳನ್ನು ಮಾರಾಟಕ್ಕಿಡಲಾಗಿತ್ತು. ಹಾಗೆಯೇ ಮೋಜಿನ ಮನರಂಜನಾ ಆಟಗಳು ಇದ್ದವು. ಮಾರುವರು ಮತ್ತು ಕೊಳ್ಳುವವರ ನಡುವೆ ಚೌಕಾಸಿ ವ್ಯಾಪಾರ ಬಲು ಜೋರಾಗಿತ್ತು. ವಿದ್ಯಾರ್ಥಿಗಳು ವ್ಯಾಪಾರ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು. ಕೆಲವು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಮಳಿಗೆ ತೆರೆದು ವ್ಯಾಪಾರ ಮಾಡಿದರು.ಅರ್ಧ ದಿನ ನಡೆದ ಮಕ್ಕಳ ಸಂತೆಯಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ವ್ಯಾಪಾರ ವಹಿವಾಟು ನಡೆಯಿತು. ವ್ಯಾಪಾರ ಸುಂಕವಾಗಿ 350 ರು. ಗಳು ಸಂಗ್ರಹವಾಯಿತು. ಸಂತೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತುನೀಡಲಾಗಿತ್ತು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿತ್ತು. ಜೊತೆಗೆ ವ್ಯಾಪಾರದಲ್ಲಿ ಮೋಸ ನಡೆಯದಂತೆ ಎಚ್ಚರಿಕೆಯ ಕ್ರಮ ವಹಿಸಲಾಗಿತ್ತು.
ಮುಖ್ಯ ಶಿಕ್ಷಿಕಿ ಪಿ.ಎನ್. ವೀಣಾ ಅವರು ಕೃಷಿ ಉತ್ಪನ್ನಗಳನ್ನು ಹಣ ಕೊಟ್ಟು ಖರೀದಿಸುವ ಮೂಲಕ ಉದ್ಘಾಟಿಸಿ, ಮಕ್ಕಳ ಸಂತೆಗೆ ಚಾಲನೆ ನೀಡಿದರು. ಶಿಕ್ಷಕ ಮತ್ತು ಸಾಹಿತಿ ಟಿ. ಸತೀಶ್ ಜವರೇಗೌಡ ಮಕ್ಕಳ ಸಂತೆಯ ನೀತಿ-ನಿಯಮ ಮತ್ತು ವಿಧಿ ವಿಧಾನಗಳ ಬಗ್ಗೆ ತಿಳಿಸಿದರು.ಶಿಕ್ಷಕರಾದ ಶಶಿಧರ್, ಎಚ್.ಎಸ್. ಸುನಿಲ್ ಕುಮಾರ್ ಮತ್ತು ರಂಗಸ್ವಾಮಿ ಅವರು ಮಕ್ಕಳ ಸಂತೆಯ ನಿರ್ವಹಣೆ ಮಾಡಿದರು.
ಮಕ್ಕಳ ಸಂತೆಯಿಂದ ವಿದ್ಯಾರ್ಥಿಗಳಿಗೆ ವಿವಿಧ ಉತ್ಪನ್ನ, ವ್ಯಾಪಾರ, ಮಾರಾಟ, ಖರೀದಿ, ವ್ಯಾಪಾರಿ, ಗ್ರಾಹಕ, ಬಂಡವಾಳ, ಅಸಲು, ಲಾಭ, ನಷ್ಟ, ಚೌಕಾಸಿ, ಕೂಡುವ, ಕಳೆಯುವ, ತೂಕ, ಅಳತೆ, ಮೋಸ ಇತ್ಯಾದಿ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಿತ ಆರ್ಥಿಕ ವ್ಯವಹಾರಗಳ ಪರಿಕಲ್ಪನೆಯ ಕಲಿಕೆ ಹಾಗೂ ತಿಳಿವಳಿಕೆಯ ಪ್ರತ್ಯಕ್ಷ ಅನುಭವ ಉಂಟಾಯಿತು.