ಮಕ್ಕಳ ಅಭಿರುಚಿ ಗಮನಿಸಿ ಪ್ರೋತ್ಸಾಹ ನೀಡಬೇಕು: ಮಾಧವ ಭಟ್ ಕೊಳಗಿ

KannadaprabhaNewsNetwork |  
Published : Jun 12, 2025, 12:32 AM IST
ಚಂಡೆ ಬಾರಿಸಿ ಉದ್ಘಾಟಿಸಿದರು | Kannada Prabha

ಸಾರಾಂಶ

ಎಲ್ಲ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಅವರ ಆಸಕ್ತಿ, ಅಭಿರುಚಿ ತಿಳಿದು ಪೋಷಕರು ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಯಕ್ಷಗಾನದ ಹಿರಿಯ ಭಾಗವತ ಮಾಧವ ಭಟ್ ಕೊಳಗಿ ಅಭಿಪ್ರಾಯಪಟ್ಟರು.

ಯಕ್ಷಗಾನ ತರಬೇತಿ ಕೇಂದ್ರ । ಆಸಕ್ತ ಮಕ್ಕಳಿಗಾಗಿ ಆರಂಭ । ಚಂಡೆ ಬಾರಿಸುವ ಮೂಲಕ ಚಾಲನೆ

ಕನ್ನಡಪ್ರಭ ವಾರ್ತೆ ಸಾಗರ

ಎಲ್ಲ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಅವರ ಆಸಕ್ತಿ, ಅಭಿರುಚಿ ತಿಳಿದು ಪೋಷಕರು ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಯಕ್ಷಗಾನದ ಹಿರಿಯ ಭಾಗವತ ಮಾಧವ ಭಟ್ ಕೊಳಗಿ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ಶಿವಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಸಕ್ತ ಮಕ್ಕಳಿಗಾಗಿ ಆರಂಭಿಸಲಾದ ಯಕ್ಷಗಾನ ತರಬೇತಿ ಕೇಂದ್ರವನ್ನು ಚಂಡೆ ಬಾರಿಸಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ಅವರ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.

ಯಕ್ಷಗಾನ ಕಲಿಕೆ ಕಷ್ಟ. ಆದರೆ ಹೆಚ್ಚಿನ ಶ್ರದ್ಧೆ, ಆಸಕ್ತಿಯಿಂದ ಈ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಈ ಕೇಂದ್ರದಲ್ಲಿ ಕಲಿಕಾ ದೀಪ ನಿರಂತರವಾಗಿ ಬೆಳಗುತ್ತಿರಲಿ ಎಂದು ಆಶಿಸಿದರು.

ನಿವೃತ್ತ ಜೀವ ವಿಮಾ ಅಭಿವೃದ್ಧಿ ಅಧಿಕಾರಿ, ಕಲಾ ಪೋಷಕರಾದ ಎಂ.ಎಲ್.ಭಟ್ ಮಾತನಾಡಿ, ಈ ಪ್ರಾಂತ್ಯದಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಆದರೆ ತರಬೇತಿ ಕೇಂದ್ರಗಳು ಕಡಿಮೆ ಇವೆ. ಯಕ್ಷಗಾನದಲ್ಲಿ ಸಂಗೀತ, ಸಾಹಿತ್ಯ, ವಾಚಿಕ ಮತ್ತು ಆಹಾರ್ಯ, ಆಂಗಿಕ ಅಭಿನಯ ಪ್ರಮುಖವಾದವು. ತರಬೇತಿ ಪಡೆಯುವವರಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದನ್ನು ನಿರ್ಧರಿಸಬೇಕು. ಪೋಷಕರು ಮೊದಲು ಮಕ್ಕಳನ್ನು ಯಕ್ಷಗಾನ ಪ್ರದರ್ಶನಕ್ಕೆ ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದ ಅವರು, ಇದರಿಂದ ಅವರಲ್ಲಿ ಆ ಕಲೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ ಎಂದರು.

ಯಕ್ಷಗಾನ ಸಂಘಟಕ, ಪತ್ರಕರ್ತ ಗಣಪತಿ ಶಿರಳಗಿ ಮಾತನಾಡಿ, ಯಕ್ಷಗಾನಕ್ಕೆ ಭವಿಷ್ಯವಿಲ್ಲ, ಇತ್ತೀಚೆಗಿನ ಪ್ರದರ್ಶನಗಳು ಸಂಪ್ರದಾಯದ ಚೌಕಟ್ಟನ್ನು ಮೀರುತ್ತಿವೆ ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ. ಆದರೆ ಯಕ್ಷಗಾನ ರಂಗಕ್ಕೆ ಹೊಸ ಪೀಳಿಗೆಯ ಯುವಕರು ಬರುತ್ತಿದ್ದಾರೆ. ಮಕ್ಕಳು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಯಕ್ಷಗಾನ ರಂಗ ಚೈತನ್ಯ ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.

ಯಕ್ಷ ಗುರು ಶಿವು ಶಿರಳಗಿ ಮಾತನಾಡಿದರು. ತರಬೇತಿ ಕೇಂದ್ರದ ಸಂಚಾಲಕ ಎಸ್.ಸಿ.ಸೈದೂರ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ ಶ್ರೀಧರ ಭಟ್ ಗೀಜಗಾರು, ಯಕ್ಷಗಾನ ಸಂಘಟಕರಾದ ಪ್ರಶಾಂತ ಹೆಗಡೆ, ವಿಜಯಕುಮಾರ್ ಮತ್ತಿತರರು ಹಾಜರಿದ್ದರು. ಷಣ್ಮುಖ ಸ್ವಾಗತಿಸಿದರು. ರವೀಶ್ ಹೆಗಡೆ ವಂದಿಸಿದರು. ರಾಜು ಭಾಗವತ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?