ಕುಷ್ಟಗಿ/ಕೊಪ್ಪಳ:
ಬೆಳಗ್ಗೆಯಿಂದ ತಾಲೂಕಿನ ನಾನಾ ಗ್ರಾಮಗಳಿಂದ ನಾನಾ ವಾಹನದಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳು ಸಂತಸದಿಂದ ಕಾರ್ಯಾಗಾರಕ್ಕೆ ಆಗಮಿಸಿದರು. ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಆಗಮಿಸಿದರು. ಸಭಾಂಗಣ ಮಾತ್ರವಲ್ಲದೇ ವೇದಿಕೆಯ ಮೇಲೂ ವಿದ್ಯಾರ್ಥಿಗಳು ಆಸೀನರಾಗಿದ್ದರು. 64 ಶಾಲೆಗಳಿಂದ ಸುಮಾರು ಎರಡು ಸಾವಿರ ಮಕ್ಕಳು ಆಗಮಿಸಿದ್ದರು. 125ಕ್ಕೂ ಹೆಚ್ಚು ಶಿಕ್ಷಕರು ಸಹ ಬಂದಿದ್ದರು.
ಕಾರ್ಯಾಗಾರಕ್ಕೆ ಆಗಮಿಸಿದ ಮಕ್ಕಳಿಗೆ ಸಿವಿಸಿ ಫೌಂಡೇಶನಿಂದ ನೋಟ್ ಪ್ಯಾಡ್ ಹಾಗೂ ಪೆನ್ನು ವಿತರಿಸಲಾಯಿತು. ಇಡೀ ಸಂಭಾಗಣ ಮಕ್ಕಳ ಕಲರವದಿಂದ ಕೂಡಿತ್ತು. ದಿನಪೂರ್ತಿ ನಡೆದ ಕಾರ್ಯಾಗಾರದಲ್ಲಿ ಬಳ್ಳಾರಿ ಸನ್ಮಾರ್ಗ ಗೆಳೆಯರ ಬಳಗದ ಸಂಪನ್ಮೂಲ ವ್ಯಕ್ತಿಗಳು ಅರ್ಥ ಪೂರ್ಣ ಪಾಠ ಮಾಡಿ ಮಕ್ಕಳಲ್ಲಿನ ಪರೀಕ್ಷಾ ಆತಂಕ ದೂರ ಮಾಡಿದರು. ವಿದ್ಯಾರ್ಥಿಗಳಿಗೆ ಪಾಸಾಗುವ ಬಗೆ ಮತ್ತು ತಂತ್ರವನ್ನು ಸುಲಭವಾಗಿ ಹೇಳಿಕೊಟ್ಟರು. ಪಾಸಾಗುವುದು ಕಷ್ಟವೇನು ಅಲ್ಲ. ಅದಕ್ಕೆ ದೃಢ ನಿರ್ಧಾರ ಮಾಡಬೇಕು. ಇಂದಿನಿಂದಲೇ ಈಗ ಹೇಳಿಕೊಟ್ಟಂತೆ ಅಭ್ಯಾಸ ಮಾಡಿದರೆ ಸುಲಭವಾಗಿ ಪಾಸಾಗಬಹುದು ಎಂದು ಹೇಳುವ ಮೂಲಕ ಮಕ್ಕಳಲ್ಲಿನ ಪರೀಕ್ಷಾ ಭಯ ಓಡಿಸಲಾಯಿತು.ಕೇವಲ ಪಾಸಾಗುವುದು ನಿಮ್ಮ ಗುರಿಯಾಗಬಾರದು, ಗರಿಷ್ಠ ಅಂಕ ಗಳಿಸಲು ಇಂದಿನಿಂದಲೇ ಈ ಮಾದರಿಯಲ್ಲಿ ಅಭ್ಯಾಸ ಮಾಡಿ ಎಂದು ಅನೇಕ ಮಾರ್ಗಗಳನ್ನು ಹೇಳಿಕೊಡುತ್ತಿದ್ದಂತೆ ವಿದ್ಯಾರ್ಥಿಗಳು ಏಕ ಚಿತ್ತರಾಗಿ ಗ್ರಹಿಸುತ್ತಿರುವುದು ಕಂಡು ಬಂದಿತು. ಕಾರ್ಯಗಾರದಲ್ಲಿ ಮಕ್ಕಳಿಗೆ ಶಿರಾ, ಫಲಾವ್ ವ್ಯವಸ್ಥೆ ಮಾಡಲಾಗಿತ್ತು.
ಐದಾರು ಗಂಟೆಗಳ ಕಾಲ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಆಸಕ್ತಿಯಿಂದ ಭಾಗಿಯಾಗಿದ್ದರು. ಕಾರ್ಯಾಗಾರದಲ್ಲಿ ಕೇವಲ ಪಠ್ಯದ ಪಾಠ ಇರದೆ ಜನಪದ, ಹಾಸ್ಯದ ಮೂಲಕ ವಿದ್ಯಾರ್ಥಿಗಳು ಇಡೀ ದಿನ ನಗುಮೂಗದಿಂದ ಇದ್ದರು.