ಕನ್ನಡಪ್ರಭ- ಚಿತ್ರಕಲಾ ಪರಿಷತ್ತಿನ ಸಹಯೋಗದಲ್ಲಿ ಕಡೂರು ಸರ್ಕಾರಿ ಶಾಲೆ(ಜಿಜೆಸಿ)ಯಲ್ಲಿ ಚಿತ್ರಕಲಾ ಸ್ಪರ್ಧೆ
ಸರ್ಕಾರಿ ಶಾಲೆಗಳ ಮಕ್ಕಳು ಕೂಡ ಶಿಕ್ಷಣದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವುದು ಅಭಿನಂದನೀಯ ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ (ಜಿಜೆಸಿ) ಕನ್ನಡಪ್ರಭ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಭಾಗವಹಿಸುವ ಮುಖೇನ ತೋರಿಸಿಕೊಟ್ಟಿದ್ದಾರೆ. ನಾನು ಕೂಡ ಇದೇ ಶಾಲೆಯಲ್ಲಿ ಓದಿದ್ದು ಇಂದು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನಮ್ಮ ಗುರುಗಳು ಕಲಿಸಿದ ರೀತಿ ಕಾರಣ. ಸರ್ಕಾರಿ ಶಾಲೆಗಳಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಆ ಮೂಲಕ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್‍ಯಾಂಕ್ ಪಡೆಯುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗಳಲ್ಲಿ ವಿಭಿನ್ನ ಪ್ರತಿಭೆಗಳು ಇರುತ್ತವೆ. ಅದನ್ನು ಹೊರತರುವ ಕೆಲಸವನ್ನು ಶಿಕ್ಷಕರು, ಪೋಷಕರು ಮತ್ತು ಜನಪ್ರತಿನಿಧಿಗಳು ಮಾಡಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಪಾಠಕ್ಕೆ ಮಾತ್ರ ಸೀಮಿತವಾಗದೆ ಆಟಪಾಠ, ಕ್ರೀಡೆ ಕಲಾ ವಿಭಾಗಗಳಲ್ಲೂ ಭಾಗವಹಿಸಿದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಡ ವಾಗಲು ಸಾದ್ಯ. ಈ ನಿಟ್ಟಿನಲ್ಲಿ ರಾಜ್ಯ ಚಿತ್ರ ಕಲಾ ಪರಿಷತ್ ಮತ್ತು ಕನ್ನಡ ಪ್ರಭ ದಿನಪತ್ರಿಕೆ ಸಹಯೋಗದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ಪ್ರತಿಭೆ ಹೊರ ತರುವ ಕಾರ್ಯ ಮಾಡುತ್ತಿರುವುದಕ್ಕೆ ಅಭಿನಂದಿಸುತ್ತೇನೆ ಎಂದರು. ಈ ಶಾಲೆ ಮೈದಾನದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಮಾಡಿಸಲಾಗಿದ್ದು ನನ್ನ ಅಧಿಕಾರದ ಇತಿಮಿತಿಯಲ್ಲಿ ನಾನು ಓದಿರುವ ಈ ಶಾಲೆ ಅಭಿವೃದ್ದಿಗೆ ಕೆಲಸ ಮಾಡಿಕೊಡುತ್ತೇನೆ. ಶಾಲೆ ಪ್ರಾಂಗಣದ ಸಿ.ಸಿ ಕಾಮಗಾರಿಗೆ ಶಾಸಕರ ಗಮನಕ್ಕೆ ತಂದು ಮಾಡಿ ಸುವ ಭರವಸೆ ನೀಡಿದರು. ಅಲ್ಲದೆ ಈ ಶಾಲೆ ಮಕ್ಕಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಆಯ್ಕೆ ಆಗಿರುವ ವಿದ್ಯಾ ರ್ಥಿಗಳನ್ನು ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಜೆಸಿ ಪ್ರೌಢಶಾಲೆ ಪ್ರಾಂಶುಪಾಲ ಎಚ್.ಆರ್ ರೇಖಾ ಮಾತನಾಡಿ, ಸರ್ಕಾರದ ಹೈಸ್ಕೂಲು ವಿದ್ಯಾರ್ಥಿ ಗಳಿಗಾಗಿಯೇ ಕನ್ನಡಪ್ರಭ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ನಿಂದ ಸ್ಪರ್ಧೆ ಆಯೋಜಿಸಲಾಗಿದೆ. ಭಾಗವಹಿಸಿ ಗೆದ್ದಿರು ವವರನ್ನು ನೋಡಿ ಶಾಲೆ ಎಲ್ಲ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸು ವಂತಾಗಬೇಕು ಎಂದು ಕರೆ ನೀಡಿದರು. ಸರ್ಕಾರಿ ಶಾಲೆಗಳ ಬಗ್ಗೆ ಗೌರವ ಹೊಂದಿರುವ ಮತ್ತು ನಾನು ಓದಿರುವ ಶಾಲೆ ಎಂಬ ಹೆಮ್ಮೆಯಿಂದ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕಳೆದ ಶೈಕ್ಷಣಿಕ ವರ್ಷದಿಂದಲೂ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರಪಂಚ ಜ್ಞಾನ ತಿಳಿದುಕೊಳ್ಳ ಬೇಕೆಂಬ ನಿಟ್ಟಲ್ಲಿ ವಿದ್ಯಾರ್ಥಿಮಿತ್ರ ಪತ್ರಿಕೆಗಳನ್ನು ನೀಡುತ್ತಿದ್ದು ಚಿತ್ರ ಕಲಾ ಸ್ಪರ್ಧೆಗೆ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಶಾಲೆ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ಅವರಿಗೆ ಶಾಲೆ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು. ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು. ಎಸ್. ಸಿ. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ತಿಮ್ಮರಾಜು, ಶಿಕ್ಷಕರಾದ ಎಸ್.ಸಿ ಸುಚಿತ್ರಾ, ಹರೀಶ್, ಕನ್ನಡಪ್ರಭ ಪ್ರತಿನಿಧಿ ಕೆ.ಎನ್ .ಕೃಷ್ಣಮೂರ್ತಿ,ಶಾಲೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.18ಕೆಕೆಡಿಯು1.
ಕಡೂರಿನ (ಜಿಜೆಸಿ) ಸರ್ಕಾರಿ ಫ್ರೌಢಶಾಲೆಯಲ್ಲಿ ಕನ್ನಡಪ್ರಭ ಮತ್ತು ರಾಜ್ಯ ಚಿತ್ರಕಲಾ ಪರಿಷತ್ತಿನ ಸಹಯೋಗದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು.ಪ್ರಾಂಶುಪಾಲರಾದ ಎಚ್. ಆರ್ . ರೇಖಾ ಮತ್ತಿತರರು ಇದ್ದರು.