ಕನ್ನಡಪ್ರಭ ವಾರ್ತೆ ಹಲಗೂರು
ಮಕ್ಕಳಿಗೆ ಅಗತ್ಯವಾದ ನೈತಿಕ ಶಿಕ್ಷಣ ಮತ್ತು ಮಾನವೀಯ ಮೌಲ್ಯ ತುಂಬುವ ಶಿಕ್ಷಣ ನೀಡಲು ಕ್ರಮವಹಿಸಬೇಕು ಎಂದು ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ ಕರೆ ನೀಡಿದರು.ಸಮೀಪದ ಹಲಗೂರು (ಹಂಡನಹಳ್ಳಿ) ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್‌ನಿಂದ ಆಯೋಜಿಸಿದ್ದ ಪ್ರಾರ್ಥನೋತ್ಸವ, ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಕ್ಕಳ ಕಲಿಕೆಯಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಆರೋಗ್ಯಕರ ಪೈಪೋಟಿ ಮಾತ್ರ ಕಲಿಕೆಯಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಪರಾಧ ಪ್ರಕರಣಗಳಲ್ಲಿ ಸಿಲುಕುತ್ತಿರುವುದು ಅಪಾಯಕಾರಿ ಬೆಳವಣಿಗೆ. ಪೋಷಕರು ಮಕ್ಕಳ ಚಲನ ವಲನ ಕುರಿತು ಜಾಗೃತಿ ವಹಿಸಬೇಕು ಎಂದು ಪೋಷಕರನ್ನು ಎಚ್ಚರಿಸಿದರು.ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜು ಈರೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಗಳ ಕೊಂಡಿ ಕಳಚಿ ಹುಚ್ಚರ ಸಂತೆಯಾಗುತ್ತಿವೆ. ಹಳ್ಳಿಗಳಲ್ಲಿ ವಾಸ ಮಾಡುವುದೇ ಕಷ್ಟಕರ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ವಿಷಾದಿಸಿದರು.
ವಿದ್ಯಾಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಪೋಷಕರು ಪೂರಕ ವಾತವಾರಣ ಸೃಷ್ಟಿ ಮಾಡಬೇಕು ಎಂದರು.ಪ್ರಾರ್ಥನಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ರವಿ ಸಾವಂದಿಪುರ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಮೂಲ ಗುರಿಯಾಗಿದೆ. ಇದರ ಜೊತೆಗೆ ಮಾಂಟೆಸ್ಸರಿ ತರಗತಿಗಳಿಂದಲೂ ಡಿಜಿಟಲ್ ತರಗತಿ ಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಯೋಜನೆ ರೂಪಿಸಿದ್ದು, ಪೋಷಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಲಾ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಂಬರಹಳ್ಳಿ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಮಾಂಟೆಸ್ಸರಿ ಮಕ್ಕಳಿಗೆ ಘಟಿಕೋತ್ಸವ ಜರುಗಿತು.ಈ ವೇಳೆ ಕಾರ್ಯದರ್ಶಿ ಗೀತಾ ರವಿಕುಮಾರ್, ಸಿಇಒ ರವಿಕುಮಾರ್, ನಿರ್ದೇಶಕ ಪುಟ್ಟಸ್ವಾಮಿ, ಸೇರಿದಂತೆ ಹಲವರು ಇದ್ದರು.