ಹಾವೇರಿ: ಮಕ್ಕಳು ದೇಶದ ಸಂಪತ್ತು, ಇಂದಿನ ಮಕ್ಕಳೇ ಇಂದಿನ ಪ್ರಜೆಗಳು. 6ರಿಂದ 14 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಶಾಲೆಯಲ್ಲಿರಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಹೇಳಿದರು.ನಗರದ ಕೆಎಲ್‌ಇ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸುರಕ್ಷತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮತ್ತು ಪೊಕ್ಸೋ ಕಾಯ್ದೆ ಅನುಷ್ಠಾನದ ಕುರಿತು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ ಹಾಗೂ ಆರ್‌ಟಿಇ ಕಾಯ್ದೆ ಕುರಿತು ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಮಕ್ಕಳು ಶಾಲೆ ಬಿಟ್ಟಲ್ಲಿ, ಅಂತಹ ಮಕ್ಕಳಿಗೆ ಬಾಲ್ಯವಿವಾಹ ಮಾಡುವ ಸಂಭವವಿರುತ್ತದೆ. ಹಾಗಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ, ಮಕ್ಕಳ ರಕ್ಷಣಾ ಸಮಿತಿ, ಸಲಹಾ ಪೆಟ್ಟಿಗೆ, ಮಕ್ಕಳ ಹಕ್ಕುಗಳ ಕ್ಲಬ್ ರಚನೆ ಮಾಡಬೇಕು ಎಂದು ಹೇಳಿದರು.ಒಂದು ವೇಳೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪದಿದ್ದಲ್ಲಿ ಮಕ್ಕಳು ಹಾಗೂ ಪಾಲಕರಿಗೆ ಆಪ್ತಸಮಾಲೋಚನೆ ಮಾಡಿ ಮಕ್ಕಳನ್ನು ಶಾಲೆಗೆ ಮರಳಿ ಸೇರಿಸಲು ಕ್ರಮವಹಿಸಬೇಕು. ತಾಯಂದಿರು ಮಕ್ಕಳು ಶಾಲೆಯಿಂದ ಬಂದ ತಕ್ಷಣ ಮಕ್ಕಳ ಚಲನವಲನ ಗಮನಿಸಬೇಕು ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಬೇಕು. ವಲಸೆ ಮಕ್ಕಳಿಗೆ ಇರುವ ಸೌಲಭ್ಯಗಳ ಬಗ್ಗೆ ಪಾಲಕರಿಗೆ ತಿಳಿಸಬೇಕು ಹಾಗೂ ಎಲ್ಲಾ ಶಾಲಾ ಮುಖ್ಯೋಪಾದ್ಯಾಯರು ಬಾಲ್ಯವಿವಾಹ ನಿಷೇಧಾಧಿಕಾರಿಗಳಾಗಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶರಣಮ್ಮ ಮಾತನಾಡಿ, ಶಾಲೆಯ ಅಕ್ಕಪಕ್ಕದಲ್ಲಿ ಮಕ್ಕಳಿಗೆ ತೊಂದರೆಯಾದಲ್ಲಿ, ಗೆಳತಿಯರಿಗೆ ಮದುವೆ ಮಾಡುತ್ತಿದ್ದರೆ ಮಕ್ಕಳ ಸಹಾಯವಾಣಿ-1098ಕ್ಕೆ ಕರೆಮಾಡಿ ತಿಳಿಸಬೇಕು. ಮಕ್ಕಳಲ್ಲಿ ಸಂಸ್ಕಾರ ಮತ್ತು ಮೌಲ್ಯಗಳನ್ನು ಬಿತ್ತಬೇಕು. ಇದರಿಂದ ಮಕ್ಕಳು ಬೇರೆ ಬೇರೆ ಆಕರ್ಷಣೆಗೆ ಒಳಗಾಗುವುದನ್ನು ತಡೆಯಬಹದು. ಗಂಡು-ಹೆಣ್ಣು ಎಂದು ಬೇಧ ಮಾಡದೇ ಮಗಳು ಮತ್ತು ಮಗನಿಗೆ ಸಂಸ್ಕಾರ ನೀಡಬೇಕು ಎಂದರು.ವಿವಿಧ ಶಾಲೆಗಳಿಂದ ಮಕ್ಕಳು ಮತ್ತು ಶಾಲಾ ಶಿಕ್ಷಕರು ಹಾಗೂ ಆರ್‌ಟಿಇ ಕಾರ್ಯಕರ್ತರು, ಎಸ್‌ಡಿಎಂಸಿ ಅಧ್ಯಕ್ಷರು / ಸದಸ್ಯರು, ಮಕ್ಕಳ ಪಾಲಕರು ಭಾಗವಹಿಸಿದ್ದರು. ಯೂನೆಸೀಪ್ ಯೋಜನಾ ವ್ಯವಸ್ಥಾಪಕ ಹರೀಶ ಜೋಗಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸುರಕ್ಷತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮತ್ತು ಪೊಕ್ಸೋ ಕಾಯ್ದೆ ಅನುಷ್ಠಾನದ ಕುರಿತು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ ಹಾಗೂ ಆರ್.ಟಿ.ಇ ಕಾಯ್ದೆ ಕುರಿತು ಉಪನ್ಯಾಸವನ್ನು ನೀಡಿದರು. ಅಹವಾಲು ಸ್ವೀಕಾರ...ಆರ್‌ಟಿಇ ಕಾಯ್ದೆ-2009ರ ಕುರಿತು ಮಕ್ಕಳಿಂದ ಅಹವಾಲು ಸ್ವೀಕಾರ ಸ್ವೀಕರಿಸಲಾಯಿತು. 1ರಿಂದ 10ನೇ ತರಗತಿಯವರಿಗೆ ಆರ್‌ಟಿಇ ಸೌಲಭ್ಯವನ್ನು ಮುಂದುವರೆಸುವಂತೆ ಹಾಗೂ 8ನೇ ತರಗತಿಯಲ್ಲಿ ಓದುತ್ತಿದ್ದ ಮಗು ಆರ್ಥಿಕ ಪರಿಸ್ಥಿತಿಯಿಂದ ತುಂಬಾ ಬಡವರಾಗಿರುವುರಿಂದ 9 ಮತ್ತು 10ನೇ ತರಗತಿಗೆ ಮುಂದುವರೆಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಈ ವಿಷಯವನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಹಾಗೂ ಖಾಸಗಿ ಸಂಸ್ಥೆಯವರು ಮಾನವೀಯತೆಯಿಂದ ಇಂತಹ ಮಕ್ಕಳಿಗೆ ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಲು ಅವಕಾಶ ಒದಗಿಸುವಂತೆ ಆಯೋಗದ ಸದಸ್ಯರು ಸೂಚಿಸಿದರು.ಆರ್‌ಟಿಇ ಮಕ್ಕಳಿಗೆ ಮತ್ತು ಇತರೆ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಮನವಿ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ಶಾಲೆಗಳಲ್ಲಿ ಹೀಗೆ ಮಾಡುವುದು ಕಂಡುಬಂದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.ತಾಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ ಹುಬ್ಬಳ್ಳಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ, ಮಹಿಳಾ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ಧಾರೂಢ ಬಡಿಗೇರ, ಬಿಆರ್‌ಸಿ ಸಂಯೋಜಕ ಮಹದೇವಪ್ಪ ಎಂ.ಡಿ., ಕೆಎಲ್‌ಇ ಆಂಗ್ಲಮಾಧ್ಯಮ ಶಾಲೆ ಪ್ರಾಚಾರ್ಯ ಸ್ವಪ್ನಾ ಲೋಬೋ ಇದ್ದರು. ಬಿಇಒ ಎಂ.ಎಚ್. ಪಾಟೀಲ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಎಸ್.ಆರ್. ಹಿರೇಮಠ ವಂದಿಸಿದರು.