ರಾಣಿಬೆನ್ನೂರು: ವಿಧಾನಸಭೆಯ ಜಂಟಿ ಅಧಿವೇಶನ ನಡೆಯುತ್ತಿರುವಾಗ ರಾಜ್ಯಪಾಲರ ಕುರಿತು ಕಾಂಗ್ರೆಸ್ ಶಾಸಕರು ತೋರಿದ ದುರ್ವರ್ತನೆ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಭಿವೃದ್ಧಿಗಳಿಲ್ಲದೆ ನಿಷ್ಕ್ರಿಯವಾಗಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿ ತಹಸೀಲ್ದಾರ ಆರ್.ಎಚ್.ಭಾಗವಾನ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯದ ವಿಧಾನಸಭೆಯಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕರು ತೋರಿದ ವರ್ತನೆ ಅತ್ಯಂತ ಖಂಡನೀಯವಾದದ್ದು. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹೆಸರಿನಲ್ಲಿ ಗಲಾಟೆ ಹಾಗೂ ಅಶಾಂತಿ ಸೃಷ್ಟಿಸಿ ಸದನದ ಘನತೆಗೂ ಸಂವಿಧಾನಾತ್ಮಕ ಹುದ್ದೆಯಾದ ರಾಜ್ಯಪಾಲರ ಗೌರವಕ್ಕೂ ಧಕ್ಕೆ ತರಲಾಗಿದೆ. ಇದಕ್ಕೆ ಕಾರಣವಾದ ರಾಜ್ಯ ಸರ್ಕಾರದ ನಡೆ ಅತ್ಯಂತ ಖಂಡನೀಯವಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಸಾಂವಿಧಾನಿಕ ಹುದ್ದೆಯಲ್ಲಿರುವ ಘನವೆತ್ತ ರಾಜ್ಯಪಾಲರೊಂದಿಗೆ ಕಾಂಗ್ರೆಸ್ ಶಾಸಕರು, ಸಚಿವರಾದಿಯಾಗಿ ಅಸಂವಿಧಾನಾನಿಕ ನಡತೆ ತೋರಿ ಸದನದಲ್ಲಿ ಗೂಂಡಾವರ್ತನೆ ತೋರಿರುವುದು ಕರ್ನಾಟಕ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿದೆ. ವಿಧಾನಸಭೆಯ ಗೌರವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಇಂತಹ ನಡೆಯನ್ನು ಜೆಡಿಎಸ್ ಪಕ್ಷವು ಕಟುವಾಗಿ ಖಂಡಿಸುತ್ತದೆ. ಕಾಂಗ್ರೆಸ್ ಶಾಸಕರು ತೋರಿದ ದುರ್ವರ್ತನೆ, ರಾಜ್ಯದಲ್ಲಿ ಅಭಿವೃದ್ಧಿಗಳಿಲ್ಲದೆ ನಿಷ್ಕೃೀಯವಾಗಿರುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನುವಜಾಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ಶಹರ ಘಟಕದ ಅಧ್ಯಕ್ಷ ನಿಂಗರಾಜ ಹೊನ್ನಾಳಿ, ಶಿವು ಕಡೂರ, ಸಿದ್ಧು ಪಟ್ಟಣಶೆಟ್ಟಿ, ವೀರೇಶ ಜಂಬಗಿ, ಪೂಜಾ ದೈವಜ್ಞ, ಕಸ್ತೂರಿ ಅರ್ಕಸಾಲಿ, ಉಷಾ ಜಾಡಮಾಲಿ, ಗಂಗು ಇಚ್ಚಂಗಿ, ಲಕ್ಷ್ಮಿ ಕೆ.ಕೆ., ಗಗನದೀಪ, ಶ್ರೀನಿವಾಸ ಹೂಲಿಹಳ್ಳಿ, ದೇವರಾಜ, ಸಿ.ಕೆ.ಬಳಿಗೇರ ಮತ್ತಿತರರಿದ್ದರು.