ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ,ಕು.ಅವನಿ ಎಂ ಗೌಡ ಅವರಿಗೆ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಧರ್ ತಿಳಿಸಿದರು.
ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ನಡೆದ ವಿವಿಧ ಸಂಘಗಳ ಉದ್ಘಾಟನೆ, 8 ನೇ ತರಗತಿ ಮಕ್ಕಳಿಗೆ ಸ್ವಾಗತ ಹಾಗೂ 2024 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ಪೈಕಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ ಅವನಿ ಎಂ ಗೌಡ ಚಪ್ಪೆನಾಡುಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆ ಸಾಧನೆ ಮಾಡಿದೆ. ಈ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಅವನಿ ಎಂ ಗೌಡ ಸರ್ಕಾರಿ ಪ್ರೌಢ ಶಾಲೆಗಳ ಪೈಕಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನಗಳಿಸಿ ಈ ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದರು.ಮುತ್ತಿನಕೊಪ್ಪ ಪ್ರೌಢ ಶಾಲೆ ಹಿರಿಯ ಶಿಕ್ಷಕ ಎಚ್.ಎಂ. ಗಂಗಾಧರಪ್ಪ ಮಾತನಾಡಿ, ವಿದ್ಯಾರ್ಥಿ ಸಂಘಗಳು ವರ್ಷವಿಡೀ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಪಠ್ಯೇತರಗಳಲ್ಲೂ ಯಶಸ್ಸು ಸಾಧಿಸಬೇಕು. ಎಸ್.ಎಸ್.ಎಲ್.ಸಿ.ಯಲ್ಲಿ ಸರ್ಕಾರಿ ಶಾಲೆಗಳ ಪೈಕಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅವನಿ ಎಂ ಗೌಡ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು ಎಂದು ಕರೆ ನೀಡಿದರು. ಕು.ಅವನಿ ಎಂ ಗೌಡ ಅವರ ಪೋಷಕರಾದ ಮನೋಹರ್ ಮಾತನಾಡಿ, ಮಕ್ಕಳಿಗೆ ಪೋಷಕರ ಎದುರು ಸನ್ಮಾನ ಸಿಕ್ಕರೆ ಅದಕ್ಕಿಂತ ಸಂತೋಷದ ಕ್ಷಣ ಬೇರಿಲ್ಲ.ಇದೇ ರೀತಿ ಪ್ರತಿ ಮಕ್ಕಳು ಯಾವುದೇ ಕ್ಷೇತ್ರ ದಲ್ಲಾದರೂ ಸಾಧನೆ ಮಾಡಿ ಪೋಷಕರಿಗೆ ಕೀರ್ತಿ ತರಬೇಕು ಎಂದರು.ಇದೇ ಸಂದರ್ಭದಲ್ಲಿ ಸಭೆ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ.ಅಧ್ಯಕ್ಷ ಎಂ.ಡಿ.ಪ್ರಕಾಶ್, ಕು.ಅವನಿ ಎಂ ಗೌಡ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಸಭೆಯಲ್ಲಿ ಎಸ್.ಡಿ.ಎಂ.ಸಿ.ಸದಸ್ಯರಾದ ಮಂಜುನಾಥ್, ವರ್ಗೀಸ್, ಮಮ್ತಾಜ್ , ಶಿಕ್ಷಕ ಚಂದ್ರಪ್ಪ, ಶಿವಾನಂದ , ಶಿಕ್ಷಕಿ ಪ್ರಶಾಂತಿ ಹಾಗೂ ಸಹ ಶಿಕ್ಷಕರು ಇದ್ದರು .
--- ಬಾಕ್ಸ್--ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ಕು.ಅವನಿ ಎಂ ಗೌಡ ಎಸ್.ಎಸ್.ಎಲ್.ಸಿ.ಯಲ್ಲಿ 625 ಕ್ಕೆ 615 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನದಲ್ಲಿದ್ದಳು. ನಂತರ ಮರು ಮೌಲ್ಯ ಮಾಪನದಲ್ಲಿ 1 ಅಂಕ ಜಾಸ್ತಿ ಬಂದಿದ್ದು ಈಗ ಕು.ಅವನಿ ಎಂ.ಗೌಡ 625 ಕ್ಕೆ 616 ಅಂಕ ಗಳಿಸಿದಂತಾಗಿದೆ. ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳ ಪೈಕಿ ಮೂಡಿಗೆರೆ ವಿದ್ಯಾರ್ಥಿನಿಯೊಬ್ಬಳು ಹಾಗೂ ಕು.ಅವನಿ ಗೌಡ ಅಂಕಗಳು ಸಮವಾಗಿತ್ತು. ಇಬ್ಬರು 615 ಅಂಕ ಪಡೆದಿದ್ದರು.ಈಗ ಕು.ಅವನಿ ಎಂ ಗೌಡಗೆ 1 ಅಂಕ ಜಾಸ್ತಿಯಾಗಿದ್ದರಿಂದ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳ ಪೈಕಿ ಮುತ್ತಿನಕೊಪ್ಪ ಕು.ಅವನಿ ಎಂ ಗೌಡ ಪ್ರಥಮ ಸ್ಥಾನಕ್ಕೆ ಬಂದಿದ್ದಾರೆ.