ಶೀಘ್ರವೇ ಬೂದಿಗುಡಿ ನಿರಾಶ್ರಿತರಿಗೆ ನಿವೇಶನ ನೀಡಿಕೆ: ಶಾಸಕ ಎಚ್‌.ಕೆ.ಸುರೇಶ್‌

KannadaprabhaNewsNetwork |  
Published : Jun 21, 2024, 01:09 AM IST
20ಎಚ್ಎಸ್ಎನ್4 : 59 ಲಕ್ಷ ರು. ಮೌಲ್ಯದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸುರೇಶ್‌ ಚಾಲನೆ ನೀಡಿದರು. | Kannada Prabha

ಸಾರಾಂಶ

ಶೀಘ್ರವೇ ಬೂದಿಗುಂಡಿ ನಿರಾಶ್ರಿತರನ್ನು ಸ್ಥಳಾಂತರ ಮಾಡಿ ಅವರಿಗೆ ಒಂಟೆಮಳ್ಳಿ ಗುಡ್ಡದಲ್ಲಿ (ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ) ನಿವೇಶನ ಒದಗಿಸಿಕೊಡುವುದಾಗಿ ಬೇಲೂರು ಶಾಸಕ ಎಚ್.ಕೆ.ಸುರೇಶ್ ತಿಳಿಸಿದ್ದಾರೆ. ಬೂದಿಗುಂಡಿ ಬಡಾವಣೆಯ ರಾಜಕಾಲುವೆ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದರು.

೫೯ ಲಕ್ಷ ರು. ಅನುದಾನದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಹಳೆಬೀಡು

ಶೀಘ್ರವೇ ಬೂದಿಗುಂಡಿ ನಿರಾಶ್ರಿತರನ್ನು ಸ್ಥಳಾಂತರ ಮಾಡಿ ಅವರಿಗೆ ಒಂಟೆಮಳ್ಳಿ ಗುಡ್ಡದಲ್ಲಿ (ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ) ನಿವೇಶನ ಒದಗಿಸಿಕೊಡುವುದಾಗಿ ಬೇಲೂರು ಶಾಸಕ ಎಚ್.ಕೆ.ಸುರೇಶ್ ತಿಳಿಸಿದ್ದಾರೆ.

ಇಲ್ಲಿನ ದ್ವಾರಸಮುದ್ರ ಕೆರೆ ಪಕ್ಕದ ಬೂದಿಗುಂಡಿ ಬಡಾವಣೆಯ ರಾಜಕಾಲುವೆ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿ, ‘ಪ್ರಸಿದ್ಧ ದ್ವಾರಸಮುದ್ರ ಕೆರೆ ಹೃದಯ ಭಾಗದಲ್ಲಿ ಸುಮಾರು ೧೨೦ ಮನೆಗಳಲ್ಲಿ ಜನರು ೩೦ ವರ್ಷಗಳಿಂದ ವಾಸ ಮಾಡುತ್ತಿದ್ದು, ಈ ಸ್ಥಳ ಕೆರೆ ತುಂಬಿ ಕೋಡಿ ಬಿದ್ದ ಸಂದರ್ಭದಲ್ಲಿ ವಾಸಿಸಲು ತುಂಬ ಅಪಾಯಕಾರಿ ಸ್ಥಳವಾಗಿದೆ. ಹೀಗಾಗಿ ಇಲ್ಲಿಯ ಜನರ ಸುರಕ್ಷತೆಗಾಗಿ ಒಂಟೆಮಳ್ಳಿ ಗುಡ್ಡದ ಪ್ರದೇಶದಲ್ಲಿ ೧೨೦ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡಲು ಬದ್ಧವಾಗಿದ್ದೇನೆ’ ಎಂದು ತಿಳಿಸಿದರು.

ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳಿ ಇರುವ ಒಂಟೆಮಳ್ಳಿ ಗುಡ್ಡದ ಪ್ರದೇಶದಲ್ಲಿ ಸುಮಾರು ಆರು ಎಕ್ಟೇರ್ ಪ್ರದೇಶದಲ್ಲಿ ಬೂದಿಗುಂಡಿ ವಾಸಿಗಳಿಗೆ ಪ್ರತಿ ಕುಟುಂಬಕ್ಕೆ ೩೦/೪೦ ಅಳತೆಯ ನಿವೇಶನ ಒದಗಿಸಿಕೊಟ್ಟು ಅವರ ಸುರಕ್ಷಿತ ಬದುಕಿಗೆ ಅವಕಾಶ ಮಾಡಿಕೊಡುವುದಕ್ಕೆ ಸಿದ್ಧ. ವಾಸಕ್ಕೆ ಯೋಗ್ಯವಲ್ಲದ ಸ್ಥಳ ಬೂದಿಗುಂಡಿ. ಈ ಸ್ಥಳ ನಿಜಕ್ಕೂ ಅಪಾಯಕಾರಿ ಸ್ಥಳವಾಗಿದ್ದು ಮಳೆಗಾಲದಲ್ಲಿ ಇಲ್ಲಿನ ಜನತೆ ವಾಸ ಮಾಡುವವರು ಜೀವ ಕೈಯಲ್ಲಿ ಹಿಡಿದು ವಾಸ ಮಾಡಬೇಕಾದ ಅಪಾಯಕಾರಿ ಸ್ಥಳವಾಗಿದೆ. ಇಲ್ಲಿ ವಾಸ ಮಾಡುತ್ತಿರುವ ೧೨೦ ಮನೆಗಳಲ್ಲಿ ಕೇವಲ ೩೪ ಮನೆಗಳು ಮಾತ್ರ ಇ-ಸ್ವತ್ತು ಮಾಡಲಾಗಿದೆ. ಇಲ್ಲಿಯ ನಿವಾಸಿಗಳ ಸುರಕ್ಷತೆಯ ಬದುಕಿಗಾಗಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಶೀಘ್ರ ಅನುಷ್ಠಾನಕ್ಕೆ ತರುತ್ತೇನೆ ಎಂದು ಹೇಳಿದರು.

ಬಾಕ್ಸ್ ಚರಂಡಿ ವ್ಯವಸ್ಥೆ:

ಇಲಾಖೆ ಹಿರಿಯ ಇಂಜಿನಿಯರ್ ಸುಂದರ್‌ರಾಜ್ ಮಾತನಾಡಿ, ಸದ್ಯ ವಾಸ ಮಾಡುತ್ತಿರುವ ಬೂದಿಗುಂಡಿ ನಿವಾಸಿಗಳ ಸ್ಥಳ ಅನೈರ್ಮಲ್ಯತೆ ತಾಣವಾಗಿದ್ದು, ಸೊಳ್ಳೆ, ಕೀಟಗಳ ಆವಾಸ ತಾಣವಾಗಿದೆ. ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರೋಗ ರುಜಿನಗಳು ಹರಡುವ ಭೀತಿ ಕೂಡ ಇದೆ. ಆರೋಗ್ಯ ಇಲಾಖೆ ಕೂಡ ಈ ಸ್ಥಳ ವಾಸಿಸಲು ಸೂಕ್ತ ಸ್ಥಳವಾಗಿಲ್ಲವೆಂದು ಹಲವು ಬಾರಿ ತಿಳಿಸಿರುವ ಕಾರಣ ಸದ್ಯಕ್ಕೆ ಸಣ್ಣನೀರಾವರಿ ಇಲಾಖೆ ೫೯ ಲಕ್ಷ ರೂಪಾಯಿ ಅನುದಾನದಲ್ಲಿ ಸುಮಾರು ೧೩೦ ಮೀಟರ್ ಉದ್ದ ಚರಂಡಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿರುಪಾಕ್ಷ ಮಾತನಾಡಿ, ಬೂದಿಗುಂಡಿ ನಿವಾಸಿಗಳ ಸುಮಾರು ೧೨೦ ಕುಟುಂಬಗಳ ಭದ್ರತೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಶಾಸಕರು ತೆಗೆದುಕೊಂಡಿರುವ ನಿರ್ಧಾರ ಉತ್ತಮವಾಗಿದೆ. ದಯಮಾಡಿ ಎಲ್ಲಾ ಬೂದಿಗುಂಡಿ ನಿವಾಸಿಗಳು ಸಹಕರಿಸಬೇಕಾಗಿ ಮನವಿ ಮಾಡಿದರು.

ಎಇ ಉಮೇಶ್, ಶಾಸಕರ ಆಪ್ತ ಶಾಸಕ ಪ್ರಸನ್ನ, ಮಾಜಿ ತಾಪಂ ಸದಸ್ಯ ಸೋಮಶೇಖರ್, ಮಾಜಿ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಪಕ್ಷದ ಮುಖಂಡರಾದ ಪ್ರಸನ್ನ, ಬಸವರಾಜು, ಶಿವನಾಗ್, ರಂಜಿತ್, ರಾಜು, ಈಶ್ವರ್, ಕೆಂಪರಾಜು, ಪ್ರದೀಪ್, ಹರೀಶ್ ಹಾಜರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ