ಬಳ್ಳಾರಿ: ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ಹಾಗೂ ಲಯನ್ಸ್ ಕ್ಲಬ್ ಆಫ್ ಬಳ್ಳಾರಿ ಸಹಯೋಗದಲ್ಲಿ ನಗರದ ಕಪ್ಪಗಲ್ ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಗುರುವಾರ ಸಂಜೆ "ಸಮ್ಮರ್ ಸರಿಗಮ " ಬೇಸಿಗೆ ಶಿಬಿರ ಸಮಾರೋಪದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲೆಕ್ಕಪರಿಶೋಧಕ ಹಾಗೂ ಸಮಾಜಮುಖಿ ಚಿಂತಕ ಸಿದ್ಧರಾಮೇಶ್ವರಗೌಡ ಕರೂರು, ಬಾಲ್ಯದಿಂದಲೇ ಮಕ್ಕಳಿಗೆ ಸಂಗೀತ ಸಂಸ್ಕಾರ ನೀಡಬೇಕು. ಶಿಕ್ಷಣದ ಬಿಡುವಿನ ವೇಳೆಯಲ್ಲಿ ಸಂಗೀತಾಭ್ಯಾಸದಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು. ಮಕ್ಕಳು ಒಂದೊಲ್ಲೊಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕು. ಬೇಸಿಗೆ ಸೇರಿದಂತೆ ಇತರೆ ರಜೆ ದಿನಗಳಲ್ಲಿ ಮಕ್ಕಳು ವೃಥಾ ಕಾಲಹರಣ ಮಾಡುವ ಬದಲು ತಮಗಿಷ್ಟದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಮಹಾರುದ್ರಗೌಡ, ಶ್ರದ್ಧೆಯಿಂದ ಸಂಗೀತ ಕಲಿತರೆ, ಇದೇ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಿದೆ. ಸುಗಮ ಸಂಗೀತ ಅತ್ಯಂತ ಜನಪ್ರಿಯ ಸಂಗೀತ ಪ್ರಕಾರವಾಗಿದ್ದು, ಮಕ್ಕಳು ಪಠ್ಯ ಶಿಕ್ಷಣದ ಜೊತೆಗೆ ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸಂಗೀತ ಕಲಿಕೆಯಿಂದ ಮಕ್ಕಳು ಒತ್ತಡದಿಂದ ಹೊರಬರುತ್ತಾರೆ. ಇದರಿಂದ ಶಿಕ್ಷಣದ ಪ್ರಗತಿಗೂ ಸಂಗೀತ ಹೆಚ್ಚು ಪೂರಕವಾಗುತ್ತದೆ. ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ವಿ.ರಾಮಚಂದ್ರ, ಹಿರಿಯ ವಕೀಲ ಪರ್ವತ ರೆಡ್ಡಿ ವಿರಾಟನಗರ, ವೈದ್ಯ ಡಾ.ಸುರೇಶ್, ರಾಘವ ರೆಡ್ಡಿ ದಮ್ಮೂರು ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಅಧ್ಯಕ್ಷೆ ಕೆ.ಕವಿತಾ ಡಿ.ಕಗ್ಗಲ್ ಹಾಗೂ ಕೆ.ವಿಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.ದೊಡ್ಡ ಬಸವ ಗವಾಯಿ ಡಿ.ಕಗ್ಗಲ್, ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಶಿಬಿರಾರ್ಥಿ ವಿದ್ಯಾರ್ಥಿಗಳು ವಿವಿಧ ಕನ್ನಡ ಗೀತೆಗಳನ್ನು ಹಾಡಿದರು.
ಸರಿಗಮ ಖ್ಯಾತಿಯ ಸೃಷ್ಟಿ ಸುರೇಶ್ ಸಿನಿಮಾ ಗೀತೆಗಳನ್ನು ಹಾಡಿ ರಂಜಿಸಿದರು. ಪುಟ್ಟರಾಜ, ವೀರಪಂಚಾಕ್ಷರಿ ಕ್ಯಾಷಿಯೋ, ಉಮೇಶ್ ತಬಲಾ ಹಾಗೂ ಹರ್ಷಾ ಆಚಾರ್ ಪ್ಯಾಡ್ ಸಾಥ್ ನೀಡಿದರು. ಗಾಯಕಿ ಸೃಷ್ಟಿ ಸುರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.