ಹೊಸದುರ್ಗ : ರಾಜ್ಯದಲ್ಲಿ ಪಿ.ಎಂ.ಕುಸುಮ್ ಸಿ ಯೋಜನೆಯಡಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿಯೇ ನಿರಂತರ ವಿದ್ಯುತ್ ಸರಬರಾಜು ಮಾಡಲು 1081 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಬೆಸ್ಕಾಂನಿಂದ ಟೆಂಡರ್ ಕರೆಯಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಿಳಿಸಿದರು.
ತಾಲೂಕಿನ ಕಂಚೀಪುರ 11 ಕೆವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಬುಕ್ಕಸಾಗರ ಹಾಗೂ ನೀರಗುಂದ ವಿದ್ಯುತ್ ವಿತರಣಾ ಕೇಂದ್ರದ ಬಳಿ ಸೋಲಾರ್ ಪ್ಲಾಂಟ್ ನಿರ್ಮಿ ಸುವ ಪ್ರದೇಶ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
1081 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ 154 ಸಬ್‌ಸ್ಟೇಷನ್‌ಗಳನ್ನು ಸೌರೀಕರಣ ಮಾಡಲಾಗುತ್ತಿದ್ದು, 154 ಪ್ರಾಜೆಕ್ಟ್‌ಗಳಲ್ಲಿ ಮೇಘಾ ಇಂಜಿನಿಯರಿಂಗ್ ಸಂಸ್ಥೆಗೆ 88 ಪ್ರಾಜೆಕ್ಟ್‌ಗಳ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ಕಂಚೀಪುರ ಹಾಗೂ ನೀರಗುಂದ ಯೋಜನೆಗಳು ಸೇರಿದ್ದು, ಕಂಚೀಪುರ ಬಳಿ 5.3 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ 27 ಎಕೆರೆ ಹಾಗೂ ನೀರಗುಂದ ಬಳಿ 3.7 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 12 ಎಕೆರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದ್ದು, ಮೂರು ತಿಂಗಳೋಳಗೆ ಸೋಲಾರ್ ಪ್ಲಾಂಟ್ ನಿರ್ಮಿಸಿ ವಿದ್ಯುತ್ ಅನ್ನು ಗ್ರಿಡ್‌ಗೆ ನೀಡಲಾಗುವುದು. ಇದರಿಂದ ಕಂಚೀಪುರ ಸಬ್ ಸ್ಟೇಷನ್ ಮಾರ್ಗದಲ್ಲಿ ಬರುವ 8 ಕೃಷಿ ಪಂಪ್‌ಸೆಟ್‌ಗಳ ಮಾರ್ಗಗಳಿಗೆ ಹಗಲು ವೇಳೆಯಲ್ಲಿಯೇ 7 ತಾಸು ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೃತೃತ್ವದಲ್ಲಿ ಇಂದನ ಸಚಿವ ಜಾರ್ಜ್ ಸಹಕಾರದೊಂದಿಗೆ ಕೃಷಿಗೆ ಉಪಯುಕ್ತವಲ್ಲದ ಕರಾಬ್ ಜಮೀನುಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸೋಲಾರ್ ಎನರ್ಜಿಯನ್ನು ತಯಾರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು, 1081 ಮೆಗಾವ್ಯಾಟ್ ಉತ್ಪಾದನೆಯ ಯೋಜನೆ ಯಲ್ಲಿ ಮೊದಲ ಹಂತದಲ್ಲಿ 750 ಮೆಗಾ ವ್ಯಾಟ್ ಉತ್ಸಾದನೆಗೆ ಟೆಂಡರ್ ಕರೆಯಲಾಗಿದ್ದು, ಉಳಿದ 351 ಮೆಗಾವ್ಯಾಟ್ ಉತ್ಪಾದನೆಗೆ ರೀ ಟೆಂಡರ್ ಕರೆಯಲಾಗಿದೆ ಎಂದರು.ಈ ವೇಳೆ ಬೆಸ್ಕಾಂನ ಚಿತ್ರದುರ್ಗ ಜಿಲ್ಲಾ ಕಾರ್ಯ ನಿರ್ವಾಹಕ ಅಭಿಯಂತರ ಜಯಣ್ಣ, ಹೊಸದುರ್ಗ ಹಾಗೂ ಶ್ರೀರಾಂಪುರ ಉಪ ವಿಭಾಗದ ಶಾಖಾಧಿಕಾರಿಗಳು , ಪವರ್ ಮ್ಯಾನ್‌ಗಳು ಹಾಗೂ ಗುತ್ತಿಗೆದಾರರು ಹಾಜರಿದ್ದರು.