ಶಂಕರ ಭಗವತ್ಪಾದರ ಜಯಂತಿ । ಪಲ್ಲಕ್ಕಿ ಉತ್ಸವ
ಶಂಕರಾಚಾರ್ಯರ ಬೋಧನೆಯನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಲಿಸುವ ಕೆಲಸವಾಗಬೇಕು. ಮೊದಲು ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸಬೇಕು. ಶಂಕರಾಚಾರ್ಯರ ಪ್ರವಚನಗಳು ಎಲ್ಲರಿಗೂ ಜೀವನ ಹೇಗೆ ನಡೆಸಬೇಕು ಎಂಬುದನ್ನು ತಿಳಿಸುತ್ತವೆ. ನಮ್ಮವರಿಗೆ ಸರಿಯಾದ ಗುರು ಬೇಕಾಗಿದೆ. ಆಗ ಮಾತ್ರ ನಾವು ಸರಿಯಾದ ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗುತ್ತದೆ ಎಂದು ಶ್ರೀ ಶಂಕರ ಸೇವಾ ಸಂಘದ ಉಪಾಧ್ಯಕ್ಷ ಮೋತಿ ಸುಬ್ರಹ್ಮಣ್ಯ ಹೇಳಿದರು.
ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಶಂಕರ ಸೇವಾ ಸಂಘದಿಂದ ಆಯೋಜಿಸಿದ ಶ್ರೀ ಶಂಕರ ಭಗವತ್ಪಾದರ ಜಯಂತಿಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಶ್ರೀ ಶಂಕರಾಚಾರ್ಯರು ಲೌಕಿಕ, ಅಲೌಕಿಕ ವಿಚಾರಗಳನ್ನು ಬೋಧಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಕ್ತಿಯನ್ನು ಪಡೆಯಲು ತಿಳಿಸಿದ್ದಾರೆ ಎಂದರು.ನಮ್ಮ ದೇಶ ಇಷ್ಟೊಂದು ಪ್ರಗತಿ ಹೊಂದಲು, ನಮ್ಮ ಹಿಂದೂ ಸಮಾಜ, ಸಂಸ್ಕೃತಿ ಉಳಿಯಲು ಶಂಕರಾಚಾರ್ಯರೇ ಕಾರಣ. ಅವರಿಗೆ ನಾವು ಎಲ್ಲರೂ ಚಿರ ಋಣಿಯಾಗಿದ್ದೇವೆ. ಶ್ರೀ ಶಂಕರಾಚಾರ್ಯರ ತತ್ವ, ಆದರ್ಶಗಳನ್ನು ಪಾಲನೆ ಮಾಡಿದರೆ ಪ್ರತಿಯೊಬ್ಬರೂ ಸುಖಕರ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಸಂಜೆ ಪಾಲಕಿ ಉತ್ಸವ, ರಥೋತ್ಸವ ನಡೆದವು. ಶ್ರೀ ಶಂಕರ ಜಯಂತಿಯ ಇಂದು ಶ್ರೀ ಶಂಕರ ಭಗವತ್ಪಾದರ ಪಾಲಕಿ ಉತ್ಸವ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಜೆ ಶ್ರೀ ಶಾರದಾಂಬ ಭಜನಾ ಮಂಡಳಿಯಿಂದ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಪಾರಾಯಣ ಹಾಗೂ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಶ್ರೀನಿವಾಸ ಜೋಷಿ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಶಶಿಧರ, ನಿರ್ದೇಶಕರಾದ ಅನಿಲ್ ಬಾರೆಂಗಳ್, ಬಾಲಕೃಷ್ಣ ವೈದ್ಯ, ರಮೇಶ ಪಾಟೀಲ್, ಎಚ್.ಕೆ.ವೆಂಕಟೇಶ, ರಾಘವೇಂದ್ರ, ಪಟ್ಟಾಭಿರಾಮನ್, ಶ್ರೀಶಂಕರನ್, ಮಹಿಳಾ ಮಂಡಳಿಯ ನಳಿನ ಅಚ್ಯುತ, ಸುಮ ವೆಂಕಟೇಶ,ಕಾಮಾಕ್ಷಿ, ಪುರೋಹಿತರಾದ ಸುಬ್ರಹ್ಮಣ್ಯ ಭಟ್, ರಾಮಚಂದ್ರ ಭಟ್, ವ್ಯವಸ್ಥಾಪಕ ರಮೇಶ, ಇತರರು ಭಾಗವಹಿಸಿದ್ದರು.