ಕೊಟ್ಟೂರು: ಲಕ್ಷಾಂತರ ಭಕ್ತರ ಆರಾಧ್ಯದೈವ ಉಜ್ಜಯಿನಿ ಸದ್ಧರ್ಮ ಪೀಠದ ಒಡೆಯ ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವ ಶುಕ್ರವಾರ ಸಂಜೆ ೬ರ ಸುಮಾರಿನಲ್ಲಿ ವಿಜೃಂಭಣೆಯಿಂದ ಭಕ್ತ ಸಾಗರದ ಮಧ್ಯೆ ನೆರವೇರಿತು.
ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದ ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವ ಈ ಸಾಲಿನಲ್ಲಿ ಉಳಿದೆಲ್ಲ ರಥೋತ್ಸವಗಳ ಪೈಕಿ ಕೊನೆಯದಾಗಿದ್ದು, ಪುನರ್ವಸು ನಕ್ಷತ್ರದಲ್ಲಿ ಈ ಪ್ರಕ್ರಿಯೆ ಜರುಗಿತು. ಇದಕ್ಕೂ ಮೊದಲು ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಕರ್ಯಗಳು ನೆರವೇರಿದ ಆನಂತರ ಸಂಜೆ ೫.೨೫ರ ವೇಳೆಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮಹೋತ್ಸವದೊಂದಿಗೆ, ಸದ್ಧರ್ಮ ಪೀಠದ ಬಿರುದಾವಳಿಗಳೊಂದಿಗೆ ಹೊರತರಲಾಯಿತು. ಆನಂತರ ಉತ್ಸವ ಮೂರ್ತಿಯನ್ನು ರಥದೊಳಗೆ ಕುಳ್ಳಿರಿಸಲಾಯಿತು. ೧೦೦೮ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ರಥವೇರಿ ಆಶೀರ್ವದಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ಪಟಾಕಿ ಸವಾಲು: ಇದಕ್ಕೂ ಮೊದಲು ಸ್ವಾಮಿಯ ರಥದ ಪಟಾಕಿ ಸವಾಲು ಪ್ರಕ್ರಿಯೆ ನಡೆಯಿತು. ಪಟಾಕಿಯನ್ನು ₹೩,೨೬,೧೦೧ ಲಕ್ಷಗಳಿಗೆ ಕೆರೆಗೂಡಿಹಳ್ಳಿ ನಂದೀಶ ತನ್ನದಾಗಿಸಿಕೊಂಡರು.
ಆನಂತರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ದೊರಕುತ್ತಿದ್ದಂತೆ ನೆರೆದಿದ್ದ ಭಕ್ತರು ಬಾಳೆಹಣ್ಣು, ಸೂರುಬೆಲ್ಲ, ಧವನ ಮತ್ತಿತರ ವಸ್ತುಗಳನ್ನು ರಾಶಿಯೋಪಾದಿಯಲ್ಲಿ ತೂರಿ ನಮಿಸಿ ಭಕ್ತಿ ಸಮರ್ಪಸಿದರು. ಭಕ್ತರು ರಥವನ್ನು ಬನ್ನಿಮರದ ಬಳಿಯತ್ತ ಎಳೆದರು. ಪಾದಗಟ್ಟೆ ಮೂಲಕ ಗಂಭೀರ ನಡೆಯೊಂದಿಗೆ ಸಾಗಿದ ರಥವನ್ನು ಭಕ್ತರು ಎಳೆದೊಯ್ಯಲು ಮುಗಿಬಿದ್ದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೇಲ್, ಶಾಸಕರಾದ ಕೂಡ್ಲಿಗಿ ಡಾ. ಎನ್.ಟಿ. ಶ್ರೀನಿವಾಸ್, ಜಗಳೂರಿನ ದೇವೇಂದ್ರಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮತ್ತಿತರರು ಹಾಜರಿದ್ದು, ಶ್ರೀಸ್ವಾಮಿಯ ಭವ್ಯ ರಥೋತ್ಸವ ಕಣ್ತುಂಬಿಕೊಂಡು ಭಕ್ತಿ ಸಮರ್ಪಿಸಿದರು.ಸಮಾಳದ ಆರ್ಭಟ, ನಂದಿಕೋಲುಗಳ ಕುಣಿತ ಮತ್ತಿತರ ವಾದ್ಯಗಳ ನಿನಾದದೊಂದಿಗೆ ರಥೋತ್ಸವ ಸಾಗಿ ಮುಖ್ಯ ಬಜಾರ ಮುಖಾಂತರ ಗ್ರಾಪಂ ಕಾರ್ಯಾಲಯ ಮುಂಭಾಗದ ಸ್ವಸ್ಥಾನದಲ್ಲಿ ಸಂಜೆ ೭.೩೦ರ ಸುಮಾರಿಗೆ ನೆಲೆ ನಿಂತಿತು.