ಕಸಾಪ ಮಹಿಳಾ ಘಟಕದಿಂದ ವಿಶ್ವ ತಾಯಂದಿರ ದಿನಾಚರಣೆ । ಆಚಾರ್ಯ ನಮನ ಕಾರ್ಯಕ್ರಮ
ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ತಾಯಂದಿರು ಮಕ್ಕಳಿಗೆ ಕಲಿಸಬೇಕು ಎಂದು ಕೊಪ್ಪದ ಸಂಸ್ಕೃತಿ ಚಿಂತಕ ಅರವಿಂದ ಸೋಮಯಾಜಿ ಕರೆ ನೀಡಿದರು.
ಶುಕ್ರವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ತಾಲೂಕು ಕಸಾಪ ಮಹಿಳಾ ಘಟಕ ಏರ್ಪಡಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಹಾಗೂ ಆಚಾರ್ಯ ನಮನ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ತಾಯಂದಿರ ಹಾಗೂ ಶಿಕ್ಷಕರ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಇಂದಿನ ಮಕ್ಕಳಿಗೆ ಶಿಕ್ಷಕರ ಮೇಲೆ ಭಯವೂ ಇಲ್ಲ.ಪ್ರೀತಿಯೂ ಇಲ್ಲವಾಗಿದೆ. ಸಕಾರಾತ್ಮಕ ಚಿಂತನೆ ಹೆಚ್ಚಿಸುವ ಉತ್ತಮ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುತ್ತಿಲ್ಲ. ಇದು ತಾಯಂದಿರ ಸೋಲಾಗಿದೆ. ಸಮಾಜದಲ್ಲಿ ನೈತಿಕತೆ ಕುಸಿದಿದೆ. ನಮ್ಮ 5 ಇಂದ್ರಿಯಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು. ಬಳಸಿದಷ್ಟು ಇಂದ್ರಿಯಗಳು ಹೆಚ್ಚು ಶಕ್ತಿ ಶಾಲಿಯಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ತಾಯಂದಿರು, ಶಿಕ್ಷಕರು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ. ಗುರುಗಳು, ತಾಯಂದಿರು ಎಚ್ಚರಗೊಂಡು ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ,ತಾಯಂದಿರು ಹಾಗೂ ಪಾಠ ಹೇಳಿ ಕೊಟ್ಟ ಗುರುಗಳು ಮಕ್ಕಳಿಗೆ ಎರಡು ಕಣ್ಣುಗಳಿದ್ದಂತೆ.ತಾಯಂದಿರ ದಿನ ಎಂದರೆ ಹೆಮ್ಮೆ ಪಡುವ ದಿನವಾಗಿದೆ. ಕುಟುಂಭದ ನಿರ್ವಹಣೆಯಲ್ಲಿ ತಾಯಿಂದರ ಪಾತ್ರ ಅತಿ ದೊಡ್ಡದಾಗಿದೆ. ಶಿಕ್ಷಕರು ಮುಂದಿನ ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ತಿದ್ದಿ, ತೀಡಿ ಸುಸಂಸ್ಕೃತರನ್ನಾಗಿ ಮಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ವಿ.ಎಸ್.ಕೃಷ್ಣಭಟ್,ಕೆ.ಕೆ.ಲಕ್ಷ್ಮೀರಾವ್,ಎನ್.ಎಸ್.ಕಮಲಮ್ಮ ಹಾಗೂ ಎಂ.ಜಯಮ್ಮ ಅವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿದ್ದ ಅರವಿಂದ ಸೋಮಯಾಜಿ ಹಾಗೂ ಬಿ.ಜಯಂತಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಒಂದೊಂದು ಕನ್ನಡ ಪುಸ್ತಕವನ್ನು ನೀಡಲಾಯಿತು. ವಸಂತಿ ಸ್ವಾಗತಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.ಭಾನುಮತಿ ವಂದಿಸಿದರು.