ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಹೃದಯ ಭಾಗವಾದ ನೆಹರು ಪಾರ್ಕ್ (ಹಳೇ ಬಸ್ ನಿಲ್ದಾಣ)ನ ಹೈಮಾಸ್ಟ್ ದೀಪ ಕೆಟ್ಟು ಹಲವು ತಿಂಗಳೇ ಕಳೆದಿದ್ದು, ರಾತ್ರಿ ಸಮಯದಲ್ಲಿ ನೆಹರು ಪಾರ್ಕ್ ಬೆಳಕಿಲ್ಲದೆ ಕತ್ತಲು ಕವಿಯುತ್ತಿದೆ.ನೆಹರು ಪಾರ್ಕ್ (ಹಳೇ ಬಸ್ ನಿಲ್ದಾಣ) ಬಳಿ ಪುರಸಭೆ ಬಯಲು ರಂಗ ಮಂದಿರವಿದೆ. ಪಾರ್ಕ್ ಸುತ್ತಲೂ ಅಂಗಡಿ ಮುಂಗಟ್ಟುಗಳಿವೆ. ಜೊತೆಗೆ ಆಟೋ ನಿಲ್ದಾಣ ಕೂಡ ಇದ್ದು ಜನಸಂದಣಿ ಜಾಗದಲ್ಲಿ ಬೆಳಕು ಇಲ್ಲ. ಪುರಸಭೆ ಹಿಂಬದಿಯೇ ಇರುವ ನೆಹರು ಪಾರ್ಕ್‌ನಲ್ಲಿ ಹೈಮಾಸ್ಟ ದೀಪ ದುರಸ್ತಿ ಪಡಿಸಲಾಗದಷ್ಟು ಪುರಸಭೆ ಹದಗೆಟ್ಟಿದೆಯಾ ಎಂದು ನಾಗರಿಕರು ಹಾಗೂ ಅಂಗಡಿ, ಮುಂಗಟ್ಟಿನ ವರ್ತಕರು ಪ್ರಶ್ನಿಸಿದ್ದಾರೆ.ರಾತ್ರಿ ವೇಳೆ ಖಾಸಗಿ ಬಸ್‌ಗೆ ತೆರಳುವ ಪ್ರಯಾಣಿಕರು, ಆಟೋ ಹತ್ತಲು ಬರುವ ಸಾರ್ವಜನಿಕರು ಜೊತೆಗೆ ಅಂಗಡಿ ಮುಂಗಟ್ಟುಗಳಿಗೆ ಬರುವ ಜನರು ಕತ್ತಲಲ್ಲೇ ಬರುತ್ತಾರೆ ಹಾಗೂ ತೆರಳುತ್ತಿದ್ದಾರೆ. ಹೈಮಾಸ್ಟ ಲೈಟ್ ದುರಸ್ತಿಗೆ ಪುರಸಭೆ ಯಾಕೆ ಮುಂದಾಗುತ್ತಿಲ್ಲ. ಪುರಸಭೆ ಆಡಳಿತ ಮಂಡಳಿಗೆ ಆಸಕ್ತಿ ಇಲ್ಲವಾ? ಎಂಬ ಸಾರ್ವಜನಿಕರ ಪ್ರಶ್ನೆಗೆ ಪುರಸಭೆ ಉತ್ತರಿಸಬೇಕಿದೆ.
ನೆಹರು ಪಾರ್ಕ್ ಸುತ್ತಲೂ ಅಂಗಡಿ ಮುಂಗಟ್ಟು ವ್ಯಾಪಾರ ಮಾಡುವ ತನಕ ಅಂಗಡಿಗಳ ದೀಪ ಇರುತ್ತವೆ. ಅಂಗಡಿ ಮುಚ್ಚಿದ ಬಳಿಕ ನೆಹರು ಪಾರ್ಕ್ ಸಂಪೂರ್ಣ ಕತ್ತಲಾಗಲಿದೆ. ವಿದ್ಯುತ್ ಕಡಿತವಾದರೆ ನೆಹರು ಪಾರ್ಕ್ ಬಹುತೇಕ ಕಗ್ಗತ್ತಲಲ್ಲಿ ಮುಳಗಲಿದೆ. ಈ ಸಮಯದಲ್ಲಿ ಕಳ್ಳರು ಕೈ ಚಳಕ ತೋರಿ ಕಳ್ಳತನವಾದರೆ ಪುರಸಭೆ ಹೊಣೆ ಹೊರುತ್ತಾ? ಅಥವಾ ಪೊಲೀಸರು ಹೊಣೆ ಹೊರುತ್ತರಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.ಪೊಲೀಸರು ಇರಲ್ಲ!:
ಜನಸಂದಣಿ ಪ್ರದೇಶವಾದ ನೆಹರು ಪಾರ್ಕ್ ಬಳಿ ಓರ್ವ ಪೇದೆಯನ್ನು ನಿಯೋಜಿಸಲು ಪೊಲೀಸ್ ಇಲಾಖೆ ಕೂಡ ಮೀನಮೇಷ ಎಣಿಸುತ್ತಿದೆ ಎಂಬ ಆರೋಪವೂ ಪೊಲೀಸ್ ಇಲಾಖೆ ಮೇಲಿದೆ.ದುರಸ್ತಿಗೆ ಆಗ್ರಹ:ಪುರಸಭೆ ಸಮೀಪ ಹಾಗೂ ಪಟ್ಟಣದ ಹೃದಯ ಭಾಗವಾದ ನೆಹರು ಪಾರ್ಕ್ (ಹಳೇ ಬಸ್ ನಿಲ್ದಾಣ)ನಲ್ಲಿ ಹೈ ಮಾಸ್ಟ್ ದೀಪ ಕೆಟ್ಟಿದೆ. ಕೂಡಲೇ ಪುರಸಭೆ ದುರಸ್ತಿ ಪಡಿಸಲು ಮುಂದಾಗಲಿ ಎಂದು ಸಾರ್ವಜನಿಕರು ಪುರಸಭೆಯನ್ನು ಆಗ್ರಹಿಸಿದ್ದಾರೆ.