ಮಕ್ಕಳಿಗೆ ಮೂಲಭೂತ ಸೌಲಭ್ಯ ದೊರೆಯಲಿ

KannadaprabhaNewsNetwork |  
Published : Dec 30, 2023, 01:15 AM IST
೨೯ಎಚ್‌ವಿಆರ್೪, ೪ಎ | Kannada Prabha

ಸಾರಾಂಶ

ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ನ್ಯಾಯ ಕಾಯ್ದೆ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಅನುಷ್ಠಾನಕ್ಕೆ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.

ಹಾವೇರಿ: ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಮೂಲಭೂತ ಸೌಲಭ್ಯಗಳು ದೊರೆಯಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರ್‌ಗೌಡ ಜಿ. ರಾಮತ್ನಾಳ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫, ಪೊಕ್ಸೋ ಕಾಯ್ದೆ-೨೦೧೨, ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬, ಆರ್.ಟಿ.ಇ. ಕಾಯ್ದೆ-೨೦೦೯ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-೨೦೧೬ರ ಕುರಿತು ಜಿಲ್ಲೆಯ ಎಲ್ಲ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಸತಿ ನಿಲಯಗಳ ಪ್ರಾಂಶುಪಾಲರು, ಹಾಸ್ಟೆಲ್ ವಾರ್ಡನ ಹಾಗೂ ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರಿಗೆ ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಪ್ರದರ್ಶನವಾಗಬೇಕು, ಸಲಹಾ ಪೆಟ್ಟಿಗೆ ಇಡಬೇಕು, ಮಕ್ಕಳ ಕ್ಲಬ್‌ಗಳ ರಚನೆ ಮಾಡಬೇಕು. ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳನ್ನು ತಿಳಿದುಕೊಂಡು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ನ್ಯಾಯ ಕಾಯ್ದೆ ಮೂಲ ಉದ್ದೇಶವಾಗಿದೆ. ಎಲ್ಲರೂ ತಮ್ಮ ಕಾರ್ಯವ್ಯಾಪ್ತಿ ಅರಿತುಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಾಗ ಕಾಯ್ದೆಗಳ ಅನುಷ್ಠಾನ ಸಾಧ್ಯ ಎಂದು ಹೇಳಿದರು.

ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ನ್ಯಾಯ ಕಾಯ್ದೆ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಅನುಷ್ಠಾನಕ್ಕೆ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಾಯ್ದೆಗಳ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳ ಸಹಕಾರ ಬಹಳ ಅಗತ್ಯ ಎಂದು ಹೇಳಿದರು.

ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ, ಸಂವಿಧಾನದ ಆಶಯಗಳನ್ನು ಈಡೇರಿಸುವ ಕೆಲಸವಾಗಬೇಕು. ಮಕ್ಕಳ ಹಿತಾಸಕ್ತಿ ಕಾಯ್ದೆಗಳು ಹಾಗೂ ಮೂಲಭೂತ ಹಕ್ಕುಗಳ ಅರಿವು ಮೂಡಿಸಬೇಕು. ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪ್ರಾಥಮಿಕ ಕಾಯ್ದೆಗಳ ಅರಿವು ಅಗತ್ಯವಾಗಿದೆ. ಮಕ್ಕಳ ಹಕ್ಕುಗಳ ಕುರಿತು ಸಾರ್ವಜನಿಕವಾಗಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ಮಾತನಾಡಿ, ಮಕ್ಕಳನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಕ್ಕಳಿಗೆ ಸಿಗಬೇಕಾದ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಟಿವಿ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಜಿಲ್ಲೆಯ ಪೊಕ್ಸೋ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಅರಿವು ಮೂಡಿಸಬೇಕು ಎಂದು ಹೇಳಿದರು.

ಕೊಪ್ಪಳ ಯುನಿಸೆಫ್ ಕಾರ್ಯಕ್ರಮ ಯೋಜನಾ ವ್ಯವಸ್ಥಾಪಕ ಹರೀಶ ಜೋಗಿ ಮಕ್ಕಳ ರಕ್ಷಣಾ ನೀತಿ-೨೦೧೬, ಬಾಲ ನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫, ಪೊಕ್ಸೋ ಕಾಯ್ದೆ-೨೦೧೨ರ ಕುರಿತು ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ ಮತ್ತು ಆರ್.ಟಿ.ಇ. ಕಾಯ್ದೆ-೨೦೦೯ರ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಕುರಿತ ಭಿತ್ತಿ ಪತ್ರ ಹಾಗೂ ಮಕ್ಕಳ ರಕ್ಷಣಾ ಘಟಕದಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಣ್ಣಪ್ಪ ಹೆಗಡೆ ಸ್ವಾಗತಿಸಿದರು. ವಿನಯ ಗುಡದೂರ ನಿರೂಪಿಸಿ, ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ