ಯಲ್ಲಾಪುರದ ನಾಗರಾಜ ಭಟ್ಟ ಸ್ವರ್ಣವಲ್ಲೀ ಶ್ರೀ ಉತ್ತರಾಧಿಕಾರಿ

KannadaprabhaNewsNetwork |  
Published : Dec 30, 2023, 01:15 AM IST
ಸ್ವರ್ಣವಲ್ಲಿ ಶ್ರೀಗಳ ಶಿಷ್ಯ ನಾಗರಾಜ ಭಟ್  | Kannada Prabha

ಸಾರಾಂಶ

ಸ್ವರ್ಣವಲ್ಲೀ ಮಠದಲ್ಲೇ ಕಳೆದ ಒಂದು ದಶಕಗಳಿಂದ ವೇದಾಧ್ಯಯನ ನಡೆಸಿ, ಇದೀಗ ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿರುವ ೨೩ರ ವಯೋಮಾನದ ನಾಗರಾಜ್ ಭಟ್ಟ ಅವರು ಗಣಪತಿ ಭಟ್ಟ ಹಾಗೂ ಭುವನೇಶ್ವರಿ ಅವರ ಪ್ರಥಮ ಪುತ್ರರು.

ಶಿರಸಿ:

ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನೂತನ ಶಿಷ್ಯರ ಸ್ವೀಕಾರಕ್ಕೆ ತೀರ್ಮಾನಿಸಿ, ಯಲ್ಲಾಪುರ ತಾಲೂಕಿನ ಈರಾಪುರ ಗ್ರಾಮದ ಗಂಗೆಮನೆಯ ವಿದ್ವಾನ್ ನಾಗರಾಜ್ ಭಟ್ಟ ಅವರನ್ನು ಶಿಷ್ಯರಾಗಿ ಸ್ವೀಕರಿಸಲು ತೀರ್ಮಾನಿಸಿದ್ದು, ಫೆ.22 ರಂದು ಶಿಷ್ಯ ಸ್ವೀಕಾರ ಸಮಾರಂಭ ನಡೆಯಲಿದೆ.

ಆಧ್ಯಾತ್ಮ, ಧಾರ್ಮಿಕ, ಸಮಾಜಮುಖಿ, ಶೈಕ್ಷಣಿಕ, ಪರಿಸರ ಸಂರಕ್ಷಣೆ, ಭಗವದ್ಗೀತಾ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಸ್ವರ್ಣವಲ್ಲೀ ಶ್ರೀಗಳ ಅಪೇಕ್ಷೆ ಹಾಗೂ ಸೂಚನೆಯಂತೆ ಕಳೆದ ಹಲವು ವರ್ಷಗಳಿಂದ ಶಿಷ್ಯರ ಹುಡುಕಾಟ ನಡೆದಿತ್ತು. ಜ್ಯೋತಿಷ್ಯರ ಸಲಹೆ, ಸೂಚನೆ ಪಡೆದು ಇದೀಗ ವಿದ್ವಾನ್‌ ನಾಗರಾಜ ಭಟ್ಟ ಅವರನ್ನು ನೇಮಿಸಲಾಗಿದೆ. ಸ್ವರ್ಣವಲ್ಲೀ ಮಠದಲ್ಲೇ ಕಳೆದ ಒಂದು ದಶಕಗಳಿಂದ ವೇದಾಧ್ಯಯನ ನಡೆಸಿ, ಇದೀಗ ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿರುವ ೨೩ರ ವಯೋಮಾನದ ನಾಗರಾಜ್ ಭಟ್ಟ ಅವರು ಗಣಪತಿ ಭಟ್ಟ ಹಾಗೂ ಭುವನೇಶ್ವರಿ ಅವರ ಪ್ರಥಮ ಪುತ್ರರು. ನಾಗರಾಜ್ ಭಟ್ಟ ಅವರನ್ನು ಶ್ರೀಗಳ ಶಿಷ್ಯರನ್ನಾಗಿ ಸ್ವೀಕರಿಸಲು ಕಳೆದ ಡಿ. ೨೫ರಂದು ನಡೆದ ಆಡಳಿತ ಮಂಡಳಿ ಸಭೆ ಕೂಡ ನಿರ್ಣಯಿಸಿ ಸಮ್ಮತಿಸಿದೆ.

ಮೂಲತಃ ಈರಾಪುರ ಗಂಗೆಮನೆಯ ಕೃಷಿ ಕುಟುಂಬದ ನಾಗರಾಜ ಭಟ್ಟ ಅವರಿಗೆ ಮೊದಲಿಂದಲೂ ಅಧ್ಯಾತ್ಮದ ಆಸಕ್ತಿ ಇತ್ತು. ಸ್ವರ್ಣವಲ್ಲೀ ಮಠದಲ್ಲಿ ಅತ್ಯಂತ ಆಸ್ಥೆಯಿಂದ ವೇದಾಧ್ಯಯನ, ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿದ್ದು, ನಾಗರಾಜ ಭಟ್ಟ ಅವರ ಕುಂಡಲಿಯನ್ನೂ ಮೂರು ಪ್ರಮುಖ ಜೋತಿಷ್ಯ ರತ್ನರ ಮೂಲಕ ಪರಿಶೀಲಿಸಿ ಒಪ್ಪಿಗೆ ಪಡೆದು ನೇಮಕ ಮಾಡಲಾಗಿದೆ. ನಾಗರಾಜ್ ಭಟ್ಟ ಅವರ ಸಹೋದರ ಉಡುಪಿಯಲ್ಲಿ ಜೋತಿಷ್ಯ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದಾರೆ.

ಶಿಷ್ಯ ಸ್ವೀಕಾರದ ಕಾರ್ಯಕ್ರಮ ಮಾಘ ಶುದ್ಧ ತ್ರಯೋದಶಿ ಫೆ. ೨೨ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ