ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು: ಸಚಿವ ಜಮೀರ್‌ ಅಹಮದ್‌ ಖಾನ್‌

KannadaprabhaNewsNetwork | Published : May 18, 2025 11:59 PM
Follow Us

ಸಾರಾಂಶ

ಶಿಕ್ಷಣ ಮಾತ್ರ ನಮ್ಮನ್ನು ಉನ್ನತ ಹಂತಕ್ಕೆ ಬೆಳೆಸಲಿದೆ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರವಹಿಸೋಣ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಶಿಕ್ಷಣ ಮಾತ್ರ ನಮ್ಮನ್ನು ಉನ್ನತ ಹಂತಕ್ಕೆ ಬೆಳೆಸಲಿದೆ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರವಹಿಸೋಣ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಬಂಜಾರ ಸ್ನೇಹ ಜೀವಿ ಯುವ ಬಳಗದಿಂದ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಬಂಜಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಕೃಷಿ, ವ್ಯಾಪಾರ, ಪಶುಪಾಲನೆಗೆ ಬಂಜಾರರ ಕೊಡುಗೆ ಅಪಾರವಾಗಿದೆ. ಭೂರಹಿತ ಬಂಜಾರರು ಶ್ರಮಜೀವಿಗಳು ಕೂಡ ಹೌದು. ಕೂಲಿ ಮಾಡಿಯಾದರೂ ಮಕ್ಕಳನ್ನು ಶಿಕ್ಷಣ ಕೊಡಿಸುವ ಛಲ ಬಂಜಾರರಲಿದೆ. ಆ ಕಾರಣದಿಂದಾಗಿ ಬಂಜಾರರ ಮಕ್ಕಳು ಶೈಕ್ಷಣಿಕವಾಗಿ ತುಂಬಾ ಸಾಧನೆ ಮಾಡುತ್ತಿದ್ದಾರೆ ಎಂದರು.

ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಮಾತನಾಡಿ, ಬಂಜಾರರ ಸೇವೆಗೆ ಸದಾ ಸಿದ್ಧನಿದ್ದೇನೆ. ಈ ಹಿಂದೆ ಶಾಸಕರಾಗಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಂಜಾರ ಸಮುದಾಯದ ಪರ ಸಾಕಷ್ಟು ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಮುದಾಯದ ಏಳಿಗೆಗೆ ಸಂಕಲ್ಪ ಮಾಡೋಣ. ಅಂಬೇಡ್ಕರ್, ಸೇವಾಲಾಲ್ ಅವರ ತತ್ವಗಳನ್ನು ಅರಿತು, ನಮ್ಮಲ್ಲಿ ಅಳವಡಿಸಿ ಹೋರಾಟದ ಮನೋಭಾವ ಮೂಡಬೇಕಿದೆ ಎಂದರು.

ಬೆಂಗಳೂರು ಹೈಕೋರ್ಟ್ ವಕೀಲ ಎನ್. ಅನಂತನಾಯ್ಕ ಮಾತನಾಡಿ, ಬಂಜಾರರಿಗೆ ಸೇವಾಲಾಲ್ ಮತ್ತು ಅಂಬೇಡ್ಕರ್ ಅವರು ಎರಡು ಕಣ್ಣುಗಳಿದಂತೆ. ಸೇವಾಲಾಲ್ ಅವರ ಸಂಸ್ಕೃತಿ, ಅಂಬೇಡ್ಕರ್ ಅವರ ಸ್ವಾಭಿಮಾನ ನಮ್ಮ ದಾರಿಯಾಗಬೇಕು. ಭೂಮಿಯ ಒಡೆತನ ಇಲ್ಲದ ಬಂಜಾರರಿಗೆ ಶಿಕ್ಷಣವೇ ಆಸ್ತಿಯಿದ್ದಂತೆ. ತಪ್ಪದೇ ಮಕ್ಕಳು ಓದಬೇಕು. ಉತ್ತಮ ಉದ್ಯೋಗದ ದಾರಿ ಹಿಡಿಯಬೇಕು ಎಂದರು.

ಕೊಟ್ಟೂರು ದೂಪದಹಳ್ಳಿ ತಾಂಡಾದ ಬಂಜಾರ ಶಿವಶಕ್ತಿ ಪೀಠದ ಶ್ರೀ ಶಿವಪ್ರಕಾಶ್ ಸ್ವಾಮೀಜಿ, ಸಂಡೂರು ತಾಲೂಕಿನ ಸುಶೀಲಾನಗರದ ಶಿವಶಕ್ತಿ ಪೀಠದ ಶ್ರೀ ತಿಪ್ಪೇಸ್ವಾಮಿ ಸ್ವಾಮೀಜಿ ಸಾನಿಧ್ಯ ವಹಿಸಿದರು. ಎಐಬಿಎಸ್‌ಎಸ್ ರಾಜ್ಯಾಧ್ಯಕ್ಷ ವಿಜಯ ಜಾಧವ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ ನಾಯ್ಕ, ಕೆ.ಶಿವಕುಮಾರ್, ಅಲೋಕ್‌ ನಾಯ್ಕ, ಮಂಜು ನಾಯ್ಕ, ವೆಂಕಟೇಶ್‌ ನಾಯ್ಕ, ರಾಮು ನಾಯ್ಕ, ಈಶ್ವರ್‌ ನಾಯ್ಕ, ರಾಜು ನಾಯ್ಕ ಮತ್ತಿತರರಿದ್ದರು. ಸಚಿವರು ಈ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ 11 ಲಕ್ಷ ರು. ಬಹುಮಾನ ನೀಡಿ, ಸನ್ಮಾನಿಸಿದರು.