ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ । ಕುಡಿಯುವ ನೀರಿನ ಘಟಕ ಉದ್ಘಾಟನೆ
ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಮಕ್ಕಳು ಸೂಕ್ತವಾಗಿ ಬಳಸುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳಬೇಕಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ₹5 ಲಕ್ಷ ವೆಚ್ಚದ ಕುಡಿಯುವ ನೀರಿನ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ತಂತ್ರಜ್ಞಾನ ವೇಗವಾಗಿ ಮಂದುವರಿಯುತ್ತಿದ್ದು ಮಕ್ಕಳ ಜ್ಞಾನ ಮಟ್ಟವೂ ಸಹ ಬೆಳೆಯುತ್ತಿದೆ. ಇಂದು ಮೊಬೈಲ್ ಮೂಲಕ ಅಂಗೈಯಲ್ಲೇ ಪ್ರಪಂಚ ಸುತ್ತಬಹುದು. ಇಂತಹ ತಂತ್ರಜ್ಞಾನವನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ಅಮೂಲ್ಯ ಹಾಗೆಯೇ ಪ್ರಾಥಮಿಕ ಶಿಕ್ಷಣ ಜೀವನದಲ್ಲಿ ಅತಿ ಮುಖ್ಯವಾದ ಘಟ್ಟವಾಗಿದೆ. ಮುಂದಿನ ಸಮಾಜ ನಿರ್ಮಾಣ ಮಾಡುವವರು ಇಂದಿನ ವಿದ್ಯಾರ್ಥಿಗಳೇ ಆಗಿದ್ದಾರೆ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.ಮಕ್ಕಳು ಗುರು ಹಿರಿಯರಿಗೆ, ಪಾಠ ಮಾಡಿದ ಶಿಕ್ಷಕರಿಗೆ ಗೌರವ ನೀಡಬೇಕು. ತಂದೆ, ತಾಯಿ ಹಾಗೂ ಪೋಷಕರು ಸಹ ಮಕ್ಕಳ ಬೆಳವಣಿಗೆ, ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಿರಿಯರ ತಮ್ಮ ಅನುಭವದ ನುಡಿಗಳನ್ನು ಕಿರಿಯರು ಕೇಳಬೇಕು. ಹಿರಿಯರನ್ನು ಎಂದಿಗೂ ತಾತ್ಸಾರದಿಂದ ನೋಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಶ ಅತಿಥಿಯಾಗಿದ್ದ ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ಯವರು ಇದನ್ನು ಉಪಯೋಗಿ ಸಿಕೊಂಡು ಎಲ್ಲಾ ಮೂಲಭೂತ ಸೌಕರ್ಯ ಮಾಡಿಸಿ ಕೊಡುತ್ತಿದ್ದಾರೆ.ಮಕ್ಕಳನ್ನು ವಿದ್ಯಾವಂತ ರನ್ನಾಗಿ ಮಾಡುವಲ್ಲಿ ಪೋಷಕರು ತ್ಯಾಗ ಅಪಾರ. ಅವರ ತ್ಯಾಗ ಗಮನಿಸಿ ಉತ್ತಮ ಶಿಕ್ಷಣ ಪಡೆಯಬೇಕು.ಯಾವುದೇ ದುಶ್ಚಟಗಳನ್ನು ಕಲಿಯದೇ ಸೋಲು, ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
-- ಬಾಕ್ಸ್ --
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಲ್ ನಿರ್ಮಾಣಕ್ಕೆ ಸಚಿವ ಜಾರ್ಜ್ ಕರ್ನಾಟಕ ಪವರ್ ಕಾರ್ಪೋರೇಷನ್ ನ ಸಿಎಸ್ಆರ್ ನಿಂದ ₹1 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ತಿಳಿಸಿದರು.
- ಬಾಕ್ಸ್- ಹುಟ್ಟೂರಿನ ನೆನಪಿಗಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಎನ್.ಆರ್.ಪುರ ಪಟ್ಟಣದ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರದಿಂದ ₹60 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದು ಭಾನುವಾರ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯಕ್ಕಾಗಿ ನರಸಿಂಹರಾಜಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.