ನವೋದಯ ವಿದ್ಯಾಲಯದಲ್ಲಿ ಓದುವ ಮಕ್ಕ‍ಳು ಭಾಗ್ಯವಂತರು

KannadaprabhaNewsNetwork | Published : Jan 5, 2025 1:31 AM

ಸಾರಾಂಶ

ಮುಂದಿನ ದಿನಗಳಲ್ಲಿ ಈ ಸಂಸ್ಥೆಯಿಂದ ಇನ್ನೂ ಉತ್ತಮ ಸಾಧಕರು ಹೊರ ಬಂದು ಗದಗ ಜಿಲ್ಲೆಗೆ ಮತ್ತು ಈ ದೇಶಕ್ಕೆ ಹೆಚ್ಚಿನ ಕೀರ್ತಿ ತರುವಂತಾಗಲಿ

ಮುಂಡರಗಿ: ಇಲ್ಲಿನ ಕೊರ್ಲಹಳ್ಳಿಯ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯ ನಮ್ಮ ಜಿಲ್ಲೆಯ ಹೆಮ್ಮೆ.ಇಲ್ಲಿ ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ ಎಲ್ಲ ಮಕ್ಕಳು ಭಾಗ್ಯವಂತರು ಎಂದು ಮುಂಡರಗಿ ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಅವರು ಇತ್ತೀಚೆಗೆ ತಾಲೂಕಿನ ಕೊರ್ಲಹಳ್ಳಿಯ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ರಜತ ಮಹೋತ್ಸವ(ಬೆಳ್ಳಿಹಬ್ಬ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಾಲೆ ಪ್ರಾರಂಭದಿಂದ ಇಲ್ಲಿಯವರೆಗೆ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿಂದ ಕಲಿತು ಹೋಗಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಯಿಂದ ಇನ್ನೂ ಉತ್ತಮ ಸಾಧಕರು ಹೊರ ಬಂದು ಗದಗ ಜಿಲ್ಲೆಗೆ ಮತ್ತು ಈ ದೇಶಕ್ಕೆ ಹೆಚ್ಚಿನ ಕೀರ್ತಿ ತರುವಂತಾಗಲಿ ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪ್ರಾರಂಭದಲ್ಲಿ ಈ ಶಾಲೆಯನ್ನು ಮುಂಡರಗಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ನಡೆಸಲಾಯಿತು. ನಂತರ ಸರ್ಕಾರ ಇದಕ್ಕಾಗಿ ಸ್ವಂತ ಜಾಗೆಯಲ್ಲಿ ಕಟ್ಟಡ ನಿರ್ಮಿಸಿ ಈ ವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು. ಇದೀಗ 25 ವರ್ಷ ಪೂರೈಸಿದ್ದು, ತಾವು ಅಂದಿನಿಂದ ಇಂದಿನವರೆಗೂ ವಿದ್ಯಾಲಯದ ಜತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವುದಾಗಿ ತಿಳಿಸಿ, ವಿದ್ಯಾರ್ಥಿಗಳು ವಿದ್ಯೆ ಸಂಪಾದನೆಯ ಜತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಂಡು ಇಂದಿನ ತಂತ್ರಜ್ಞಾನದ ಯುಗದಲ್ಲಿ ಬರುವ ಜೀವನದ ಸವಾಲು ಎದುರಿಸಿ ನೆಮ್ಮದಿಯ ಬದುಕು ಸಾಗಿಸುವ ಶಕ್ತಿ ಪಡೆಯುತ್ತಿದ್ದಾರೆ ಎಂದರು.

ನವೋದಯ ವಿದ್ಯಾಲಯ ಸಮಿತಿ ಹೈದರಾಬಾದ ವಿಭಾಗದ ಪರವಾಗಿ ಆಗಮಿಸಿದ್ದ ಅಪರ ಉಪಾಯುಕ್ತ ನಾಗಭೂಷಣಂಮಾತನಾಡಿ, ಒಂದೇ ವೇದಿಕೆಯಡಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಆಯೋಜಿಸಿರುವುದು ಖುಷಿ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ, ಬೇರೆ ವಿದ್ಯಾಲಯಗಳಿಗೆ ವರ್ಗಾವಣೆಗೊಂಡ ಸೇವೆ ಸಲ್ಲಿಸುತ್ತಿರುವ 150ಕ್ಕೂ ಹೆಚ್ಚು ಬೋಧಕ-ಬೋಧಕೇತರ ಸಿಬ್ಬಂಧಿಗಳಿಗೆ ಗುರುವಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾ.ಕಲ್ಯಾಣಿ, ಮಾಜಿ ಉಪ ಪ್ರಾ. ಜಿ.ಬಿ.ಮೇಸ್ತ್ರಿ, ವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ರುದ್ರಗೌಡ ಪಾಟೀಲ ಉಪಸ್ಥಿತರಿದ್ದರು. ಸುಮಾರು 2 ಸಾವಿರ ಹಿರಿಯ ವಿದ್ಯಾರ್ಥಿಗಳು, 1 ಸಾವಿರ ಪಾಲಕ-ಪೋಷಕರು ಪಾಲ್ಗೊಂಡಿದ್ದರು. ವಿದ್ಯಾಲಯದ ಪ್ರಭಾರಿ ಪ್ರಾ. ಜಿ.ಎಸ್. ಬಸವರಾಜು ಸ್ವಾಗತಿಸಿದರು. ರಾಜು ನಿರೂಪಿಸಿ, ಪ್ರದೀಪಕುಮಾರ ವಂದಿಸಿದರು.

Share this article