ಶಾಲೆಗಳತ್ತ ಸಂಭ್ರಮದಿಂದ ಹೆಜ್ಜೆ ಹಾಕಿದ ಚಿಣ್ಣರು

KannadaprabhaNewsNetwork | Published : Jun 1, 2024 12:45 AM

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆ, ಶಾಲಾ ಪ್ರಾರಂಭೋತ್ಸವ ಸಂಭ್ರಮ, ಸಡಗರದಿಂದ ಶುಕ್ರವಾರ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆ, ಶಾಲಾ ಪ್ರಾರಂಭೋತ್ಸವ ಸಂಭ್ರಮ, ಸಡಗರದಿಂದ ಶುಕ್ರವಾರ ಆರಂಭವಾಯಿತು.

ಕಳೆದರೆಡು ದಿನಗಳಿಂದ ಶಾಲೆಗಳನ್ನು ಸ್ವಚ್ಛಗೊಳಿಸಿ ತಳಿರು-ತೋರಣ, ರಂಗವಲ್ಲಿ ಚಿತ್ತಾರ ಬಿಡಿಸಿ ಮಕ್ಕಳನ್ನು ಸ್ವಾಗತಿಸಿಕೊಳ್ಳಲು ಶಾಲೆಗಳನ್ನು ಶಿಕ್ಷಕ ಬಾಂಧವರು ಸಜ್ಜುಗೊಳಿಸಿದ್ದರು. ಕೆಲ ಶಾಲೆಗಳಲ್ಲಿ ತಳಿರು-ತೋರಣದ ಜೊತೆಗೆ ಬಲೂನುಗಳನ್ನು ಕಟ್ಟಲಾಗಿತ್ತು. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿಕೊಳ್ಳಲಾಯಿತು. ಸರ್ಕಾರ ಶಾಲಾ ಪ್ರಾರಂಭೋತ್ಸವಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರೂ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಅಷ್ಟಾಗಿ ಕಂಡುಬರಲಿಲ್ಲ. ಕೆಲ ಶಾಲೆಗಳಲ್ಲಿಯಂತೂ ವಿದ್ಯಾರ್ಥಿಗಳು ಬೆರಳಣಿಕೆಯಷ್ಟು ಇರುವುದು ಕಂಡುಬಂದಿತ್ತು. ಶಿಕ್ಷಕ ಬಾಂಧವರು ಶಾಲೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಮಧ್ಯಾಹ್ನ ಸರ್ಕಾರದ ಆದೇಶದಂತೆ ಬಿಸಿಯೂಟದಲ್ಲಿ ಸಿಹಿಯೂಟ ವ್ಯವಸ್ಥೆ ಮಾಡಲಾಗಿತ್ತು.

ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಸರ್ಕಾರಿ 108 ಕಿರಿಯ ಪ್ರಾಥಮಿಕ ಶಾಲೆ, 181 ಹಿರಿಯ ಪ್ರಾಥಮಿಕ ಶಾಲೆ, 26 ಪ್ರೌಢಶಾಲೆಗಳಿವೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1240 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 333 ಹುದ್ದೆಗಳು ಖಾಲಿ ಇವೆ. ಸರ್ಕಾರಿ ಪ್ರೌಢಶಾಲೆಯಲ್ಲಿ 245 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 43 ಹುದ್ದೆಗಳು ಖಾಲಿ ಇವೆ. 114 ಅನುದಾನ ರಹಿತ ಪ್ರಾಥಮಿಕ ಶಾಲೆ,16 ಅನುದಾನರಹಿತ ಪ್ರೌಢಶಾಲೆ, 18 ಅನುದಾನಿತ ಪ್ರಾಥಮಿಕ ಶಾಲೆ, 39 ಅನುದಾನಿತ ಪ್ರೌಢಶಾಲೆಗಳಿವೆ. ಈಗಾಗಲೇ 018 ಕ್ಲಸ್ಟರ್‌ಗಳಲ್ಲಿ ಸಮವಸ್ತ್ರವನ್ನು ವಿತರಣೆ ಮಾಡಲಾಗಿದೆ. ಉಳಿದ ಕ್ಲಸ್ಟರ್‌ಗಳಿಗೆ ವಿತರಣೆ ಮಾಡಲಾಗುತ್ತಿದೆ. ಕಳೆದ ವರ್ಷದಲ್ಲಿ 76,579 ಮಕ್ಕಳ ದಾಖಲಾತಿಯಾಗಿತ್ತು. ಈ ವರ್ಷ 78,000 ಮಕ್ಕಳ ದಾಖಲಾತಿ ಗುರಿ ಇಟ್ಟುಕೊಳ್ಳಲಾಗಿದೆ. ಈ ವರ್ಷ ೧೫ ಶಾಲಾ ಕೋಣೆಗಳ ರಿಪೇರಿ ಮಾಡಲಾಗಿದೆ. 120 ಶಾಲಾ ಕೋಣೆಗಳ ಕೊರತೆಯಿದೆ. ಇದುವರೆಗೂ 44,528 ಉಚಿತ ಪಠ್ಯಪುಸ್ತಕ, 25,318 ಮಾರಾಟ ಪಠ್ಯಪುಸ್ತಕಗಳು ವಿತರಣೆಯಾಗಿವೆ ಎಂದು ಬಿಇಒ ವಸಂತ ರಾಠೋಡ ಮಾಹಿತಿ ನೀಡಿದರು.

ಎಲ್ಲ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿಕೊಳ್ಳಲಾಯಿತು. ಎಲ್ಲ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದೆ. ಬೇಸಿಗೆ ರಜೆ ಕಳೆದ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಹೋಗಲು ಸಿದ್ಧವಾಗುತ್ತಿದ್ದಾರೆ.

ತಾಲೂಕಿನ ಯಂಭತ್ನಾಳ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಾಜರಾದ ವಿದ್ಯಾರ್ಥಿಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು.ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಂಡು ಶಾಲಾ ಆವರಣ ಸ್ವಚ್ಛತೆಯಿಂದ ಇಟ್ಟುಕೊಳ್ಳುವ ಕಡೆಗೆ ಗಮನ ಹರಿಸಬೇಕು. ಶಿಕ್ಷಕರು ಹೇಳುವ ಪಾಠಗಳನ್ನು ಸರಿಯಾಗಿ ಆಲಿಸಿ ತಮಗೆ ಉಂಟಾದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ನಿರಂತರ ಅಧ್ಯಯನಶೀಲರಾಗಿ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದರು.

ಈ ಸಂದರ್ಭದಲ್ಲಿ ಡೋಣೂರ ಸಿಆರ್‌ಪಿ ಎಚ್.ಎಸ್.ಡೋಮನಾಳ, ಶಾಲೆಯ ಮುಖ್ಯಗುರು ಎನ್.ಎಸ್.ಸಜ್ಜನ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಎಸ್.ಮಂಗಾನವರ, ಎಸ್‌ಡಿಎಂಸಿ ಅಧ್ಯಕ್ಷ ನಿಂಗೊಂಡ ಹೊಸಮನಿ, ಉಪಾಧ್ಯಕ್ಷೆ ಪಾರ್ವತಿ ವಾಲೀಕಾರ, ಸದಸ್ಯರಾದ ಅಮರನಾಥ ಕುಮಟಗಿ, ಸಾಹೇಬಣ್ಣ ನಂದಿಹಾಳ, ಶ್ರೀಶೈಲ ಹಡಪದ, ನಿಂಗನಗೌಡ ಪಾಟೀಲ, ಬೌರಮ್ಮ ಬಳಗಾನೂರ ಇತರರು ಇದ್ದರು.

ತಾಲೂಕಿನ ಡೋಣೂರ ಗ್ರಾಮದ ಆಶ್ರಯ ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೂ ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಭೇಟಿ ನೀಡಿ ಅಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಈ ಶಾಲೆಗೆ ಮೂರು ಶಾಲಾ ಕೋಣೆಗಳು ಅಗತ್ಯವಿರುವ ಬೇಡಿಕೆಯನ್ನು ಬಿಇಒ ಅವರ ಗಮನಕ್ಕೆ ತರಲಾಯಿತು. ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಶೌಚಾಲಯ ನಿರ್ಮಾಣಕ್ಕಾಗಿ ಕೂಡಲೇ ಡೋಣೂರ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಅರ್ಜಿ, ಶಾಲೆಗೆ ಇರುವ ಎರಡು ಎಕರೆ ಆಟದ ಮೈದಾನದಲ್ಲಿ ಜಾಲಿ ಕಂಟಿ ಬೆಳೆದಿದ್ದು. ಇದರ ಸ್ವಚ್ಛತೆಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಟ್ಟು ಕೂಡಲೇ ಮೈದಾನ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಗುರುಗಳಿಗೆ ಬಿಇಒ ಸೂಚಿಸಿದರು. ಶಾಲೆಗೆ ಬಿಸಿಯೂಟದ ಸಿಬ್ಬಂದಿ ನೇಮಕ, ಬಿಸಿಯೂಟದ ಪಾತ್ರೆ ಪರಿಕರ ಖರೀದಿಗೆ ಅನುಮತಿ ನೀಡಿ ಕೂಡಲೇ ಶಾಲೆಯಲ್ಲಿ ಬಿಸಿಯೂಟ ಆರಂಭಿಸಬೇಕೆಂದು ಬಿಇಓ ಹೇಳಿದರು. ಈ ಸಂದರ್ಭದಲ್ಲಿ ಸಿಆರ್‌ಪಿ ಎಚ್.ಎಸ್.ಡೋಮನಾಳ, ಮುಖ್ಯಗುರು ಎಸ್.ಬಿ.ಗುಬ್ಬಿ ಇತರರು ಇದ್ದರು.

---

ಕೋಟ್‌

ಸರ್ಕಾರ ಶಾಲೆಗಳಲ್ಲಿ ಹಾಜರಾತಿ ಹೆಚ್ಚಳ ಮಾಡಲು ಮತ್ತು ಗುಣಮಟ್ಟದ ಕಲಿಕೆ ಒದಗಿಸುವ ಉದ್ದೇಶದಿಂದ ಶಾಲೆ ಆರಂಭ ದಿನದಂದೆ ಉಚಿತ ಪಠ್ಯಪುಸ್ತಕ, ಸಮವಸ ವಿತರಣೆ ಮಾಡುವ ಕ್ರಮ ತೆಗೆದುಕೊಂಡಿದೆ. ಸರ್ಕಾರದ ಆಶಯದಂತೆ ಇಂದು ಎಲ್ಲ ಶಾಲೆಗಳಲ್ಲಿ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಅಖಂಡ ತಾಲೂಕಿನಲ್ಲಿ ವಿತರಿಸಲಾಗಿದೆ. ಉಳಿದ ವಿದ್ಯಾರ್ಥಿಗಳಿಗೂ ಅವರು ಶಾಲೆಗೆ ಹಾಜರಾದ ದಿನದಂದು ವಿತರಣೆ ಮಾಡಲಾಗುವುದು.

-ವಸಂತ ರಾಠೋಡ ಕ್ಷೇತ್ರ ಶಿಕ್ಷಣಾಧಿಕಾರಿ

Share this article