ನಿತ್ಯ 3 ಕಿಮೀ ನಡೆದುಕೊಂಡೇ ಶಾಲೆಗೆ ತೆರಳುವ ಮಕ್ಕಳು!

KannadaprabhaNewsNetwork |  
Published : Jun 11, 2025, 12:05 PM IST
10ಎಚ್‌ಪಿಟಿ1- ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಿಂಗನಾಥನಹಳ್ಳಿ ಗ್ರಾಮದ ಮಕ್ಕಳು ನಿತ್ಯವೂ 3 ಕಿ.ಮೀ. ನಡೆದುಕೊಂಡೇ ಕಡ್ಡಿರಾಂಪುರ ಗ್ರಾಮದ ಪಿಎಂಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರುತ್ತಿದ್ದಾರೆ. | Kannada Prabha

ಸಾರಾಂಶ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಿಂಗನಾಥನಹಳ್ಳಿ ಗ್ರಾಮದ ಮಕ್ಕಳು ನಿತ್ಯವೂ ಶಾಲೆಗಾಗಿ 3 ಕಿಮೀ ನಡೆಯಲೇಬೇಕು.

ಚಿರತೆ, ಕರಡಿ ಹಾವಳಿ ಮಧ್ಯೆ ಕಡ್ಡಿರಾಂಪುರದ ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳು । ಬಸ್‌, ಆಟೋ ವ್ಯವಸ್ಥೆ ಮಾಡದ ಅಧಿಕಾರಿಗಳುಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಿಂಗನಾಥನಹಳ್ಳಿ ಗ್ರಾಮದ ಮಕ್ಕಳು ನಿತ್ಯವೂ ಶಾಲೆಗಾಗಿ 3 ಕಿಮೀ ನಡೆಯಲೇಬೇಕು. ಈ ಭಾಗದಲ್ಲಿ ಚಿರತೆ, ಕರಡಿಗಳ ಹಾವಳಿ ಇದ್ದರೂ ಅಕ್ಷರ ಕಲಿಯಲು ಅಂಗೈಯಲ್ಲಿ ಜೀವ ಹಿಡಿದುಕೊಂಡೇ ಶಾಲೆಗೆ ತೆರಳುವಂತಾಗಿದೆ.

ವಿಶ್ವವಿಖ್ಯಾತ ಹಂಪಿ ಪಕ್ಕದಲ್ಲೇ ಇರುವ ಸಿಂಗನಾಥನಹಳ್ಳಿ ಮಕ್ಕಳು, ಕಡ್ಡಿರಾಂಪುರ ಗ್ರಾಮದ ಪಿಎಂಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರುತ್ತಿದ್ದಾರೆ. ದಿನವೂ ನಡೆದುಕೊಂಡೇ ಶಾಲೆಗೆ ಬರುತ್ತಿದ್ದರೂ ಇವರ ಉತ್ಸಾಹ ಬತ್ತಿಲ್ಲ. ಅಕ್ಷರ ಕಲಿಯುವುದೇ ಇವರ ಗುರಿಯಾಗಿದೆ. ಹಾಗಾಗಿ ಮನೆಯಿಂದ ನಿತ್ಯವೂ ಶಾಲೆಗೆ ಬಂದು, ಮತ್ತೆ ಯಥಾಪ್ರಕಾರ ಶಾಲೆ ಬಿಟ್ಟ ಬಳಿಕ ನಡೆದುಕೊಂಡೇ ಮನೆ ಸೇರುತ್ತಿದ್ದಾರೆ.

ಚಿರತೆ, ಕರಡಿ ಹಾವಳಿ:

ಸಿಂಗನಾಥನಹಳ್ಳಿ ಹಾಗೂ ಕಡ್ಡಿರಾಂಪುರ ಮಧ್ಯದಲ್ಲಿ ಚಿರತೆ, ಕರಡಿಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಈ ಭಾಗ ಚಿರತೆಗಳ ಆವಾಸಸ್ಥಾನವೂ ಆಗಿದೆ. ಕುರುಚಲು ಕಾಡು ಇರುವುದರಿಂದ ಇಲ್ಲಿ ಚಿರತೆ, ಕರಡಿಗಳ ಹಾವಳಿ ಸರ್ವೇಸಾಮಾನ್ಯ. ಆಗಾಗ ಈ ಸಿಂಗನಾಥನಹಳ್ಳಿಯಲ್ಲಿ ಚಿರತೆಗಳು ಸಾಕು ನಾಯಿಗಳನ್ನು ತಿಂದು ಹಾಕುತ್ತಿವೆ. ಹೀಗಿದ್ದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಶಾಲಾ ಮಕ್ಕಳಿಗೆ ಕನಿಷ್ಟ ಪಕ್ಷ ಬಸ್‌ ವ್ಯವಸ್ಥೆ ಮಾಡಿಲ್ಲ. ಹಲವು ಬಾರಿ ಪಾಲಕರು ಆಟೋ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡರೂ ಕಾರ್ಯ ಸಾಧು ಆಗಿಲ್ಲ. ಹಾಗಾಗಿ ಅಂಗೈಯಲ್ಲಿ ಜೀವ ಹಿಡಿದುಕೊಂಡೇ ಅಕ್ಷರ ಕಲಿಯಲು ಶಾಲಾ ಮಕ್ಕಳು ತೆರಳುತ್ತಿದ್ದಾರೆ. ಈ ಮಕ್ಕಳಿಗೆ ಆಟೋ ಇಲ್ಲವೇ ಬಸ್‌ ವ್ಯವಸ್ಥೆ ಮಾಡಿದರೆ ಸಮಸ್ಯೆ ಪರಿಹಾರ ಆಗಲಿದೆ.

ಎಷ್ಟು ಜನ ಮಕ್ಕಳು:

ಈ ಗ್ರಾಮದಿಂದ ಕಡ್ಡಿರಾಂಪುರದ ಪಿಎಂಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 16 ಮಕ್ಕಳು ಬರುತ್ತಾರೆ. ಒಂದರಿಂದ ಏಳನೇ ತರಗತಿಯಲ್ಲಿ ಈ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇನ್ನೂ ಓರ್ವ ವಿದ್ಯಾರ್ಥಿನಿ ಹೊಸಮಲಪನಗುಡಿ ಹೈಸ್ಕೂಲ್‌ಗೆ ತೆರಳುತ್ತಿದ್ದರೆ, ಇಬ್ಬರು ವಿದ್ಯಾರ್ಥಿನಿಯರು ಹಾಗೂ ಓರ್ವ ವಿದ್ಯಾರ್ಥಿ ಹೊಸಪೇಟೆಗೆ ಕಾಲೇಜಿಗೆ ಬರಬೇಕಿದೆ. ಈ ವಿದ್ಯಾರ್ಥಿಗಳು ಕೂಡ ನಡೆದುಕೊಂಡೇ ಬಂದು, ಕಡ್ಡಿರಾಂಪುರ ಇಲ್ಲವೇ ಹಂಪಿಯಲ್ಲಿ ಬಸ್‌ ಏರಿ ಬರುವಂತಾಗಿದೆ.

ಈ ಗ್ರಾಮದಲ್ಲಿ ಶಾಲೆ ಇಲ್ಲ. ಪಕ್ಕದ ಕಡ್ಡಿರಾಂಪುರ ಊರಿನ ಶಾಲೆಗೆ ಮಕ್ಕಳು ತೆರಳುತ್ತಿದ್ದಾರೆ. ಇನ್ನು ಹೈಸ್ಕೂಲ್‌, ಕಾಲೇಜು ಶಿಕ್ಷಣಕ್ಕೂ ಬಸ್‌ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ. ಈ ಊರಿಗೆ ಆಟೋ ಇಲ್ಲವೇ ಬಸ್‌ ವ್ಯವಸ್ಥೆ ಮಾಡಿದರೆ ಮಕ್ಕಳು ಮಧ್ಯದಲ್ಲಿ ಶಾಲೆ ಬಿಡುವ ಕಾಟ ತಪ್ಪಲಿದೆ ಎಂಬುದು ಶಿಕ್ಷಣ ಪ್ರೇಮಿಗಳ ಅಳಲಾಗಿದೆ.

ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿಂಗನಾಥನಹಳ್ಳಿ ಗ್ರಾಮದಲ್ಲಿ 20ರಿಂದ 25 ಮನೆಗಳಿವೆ. ಈ ಜನರ ಸಮಸ್ಯೆಗೆ ಸ್ಪಂದನೆ ಮಾತ್ರ ದೊರೆಯುತ್ತಿಲ್ಲ. ಕನಿಷ್ಠ ಪಕ್ಷ ಶಾಲಾ ಮಕ್ಕಳಿಗೆ ಬಸ್‌ ಇಲ್ಲವೇ ಆಟೋ ವ್ಯವಸ್ಥೆ ಆದರೆ, ಸಾಕು ಎಂಬುದು ಈ ಗ್ರಾಮದ ನಿವಾಸಿಗಳ ಆಗ್ರಹವಾಗಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ