ಕೆ.ಎಂ.ಮಂಜುನಾಥ್
ರಜಾ ದಿನಗಳ ಬಳಿಕ ಶಾಲೆಯತ್ತ ಹೆಜ್ಜೆ ಹಾಕುವ ಮಕ್ಕಳಿಗೆ ಸಿಹಿ ನೀಡಿ ಶಾಲೆಯತ್ತ ಬರ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕ್ರಮ ವಹಿಸಿದೆ. ಶಾಲೆ ಆರಂಭದ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಶೇ.50ರಷ್ಟು ಪಠ್ಯಪುಸ್ತಕಗಳು ಬಂದಿದ್ದು ಜಿಲ್ಲಾ ಉಗ್ರಾಣದಲ್ಲಿವೆ. ಸರ್ಕಾರಿ, ಅನುದಾನಿ ಹಾಗೂ ಖಾಸಗಿ ಸೇರಿದಂತೆ ಒಟ್ಟು 1263 ಶಾಲೆಗಳಿಗೆ ಬೇಡಿಕೆಗೆ ತಕ್ಕಂತೆ ಪೂರೈಸಲಾಗುತ್ತಿದೆ. ಸ್ಥಳೀಯ ಎಸ್‌ಡಿಎಂಸಿ ಹಾಗೂ ಮುಖ್ಯಶಿಕ್ಷಕರು ಜೊತೆಗೂಡಿ ಮಕ್ಕಳಿಗೆ ಪಠ್ಯಪುಸ್ತಕ-ಸಮವಸ್ತ್ರ ವಿತರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಬಿ.ಉಮಾದೇವಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಪ್ರತಿ ಬಾರಿ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಗೆ ವಿಳಂಬವಾಗುತ್ತಿತ್ತು. ಈ ಬಾರಿ ಶಾಲೆ ಆರಂಭ ಮುನ್ನವೇ ಪುಸ್ತಕ-ಸಮವಸ್ತ್ರ ಮಕ್ಕಳ ಕೈಗೆ ಸೇರುತ್ತಿರುವುದು ಪೋಷಕರಲ್ಲಿ ನೆಮ್ಮದಿ ಮೂಡಿಸಿದೆ.ಪರಿಹಾರ ಬೋಧನೆಗೆ ಕ್ರಮ:
ಜೂನ್ ಮತ್ತು ಜುಲೈ ತಿಂಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಜೂನ್ ತಿಂಗಳಾಂತ್ಯದವರೆಗೆ ಹಿಂದಿನ ತರಗತಿಗಳ ವಿಷಯವನ್ನು ಮಕ್ಕಳಿಗೆ ಪುನರಾವರ್ತನೆ ಮಾಡಲಾಗುವುದು. 6-7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಜೂನ್ ತಿಂಗಳಲ್ಲಿ ಕಲಿಕಾ ಆಂದೋಲನ ನಡೆಸಲಾಗುತ್ತಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ವಿಶೇಷವಾಗಿ ಗಮನ ನೀಡಲು ಪರಿಹಾರ ಬೋಧನೆ ಆರಂಭಿಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಶಾಲೆಯ ಕಟ್ಟಡದ ಸ್ಥಿತಿಗತಿ, ದುರಸ್ತಿ ಕಾರ್ಯ, ಕುಡಿವನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಕ್ರಮ ವಹಿಸಿದೆ.ಖಾಸಗಿ ಶಾಲೆಗಳು ಈಗಾಗಲೇ ಶುರು: ಜಿಲ್ಲೆಯ ಖಾಸಗಿ ಶಾಲೆಗಳು ಈಗಾಗಲೇ ಶುರುವಾಗಿದೆ. ಪ್ರವೇಶ ಪ್ರಕ್ರಿಯೆ ಹಾಗೂ ಬೋಧನಾ ಪ್ರಕ್ರಿಯೆಗಳು ಆರಂಭಗೊಂಡಿವೆ. ಈ ಬಾರಿ ಖಾಸಗಿ ಶಾಲೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು ಪ್ರವೇಶಕ್ಕಾಗಿ ಪೈಪೋಟಿ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಗಮನ ಹರಿಸಬೇಕು. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಮಿತಿ ಮೀರಿದ್ದು ಜಿಲ್ಲಾಡಳಿತ ಜಾಣ ಮೌನ ವಹಿಸದೇ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೇ 29 ರಂದು ಶಾಲೆಗಳ ಪುನಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಮುಖ್ಯಶಿಕ್ಷಕರು, ಶಿಕ್ಷಕರು ಹೂಗುಚ್ಚ ನೀಡಿ ಮಕ್ಕಳನ್ನು ಸ್ವಾಗತಿಸಿಕೊಳ್ಳುವರು. ಶಾಲೆಯನ್ನು ತಳಿರು-ತೋರಣಗಳಿಂದ ಸಿಂಗರಿಸುವಂತೆ ಸೂಚಿಸಲಾಗಿದೆ. ಮಕ್ಕಳಿಗೆ ಮೂರು ದಿನ ಸಿಹಿ ವಿತರಣೆ ಮಾಡಲಾಗುವುದು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಬಿ.ಉಮಾದೇವಿ.ಶಾಲೆ ಆರಂಭ ದಿನದಂದೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಬಡ ಕುಟುಂಬಗಳಿಗೆ ಸರ್ಕಾರಿ ಶಾಲೆಗಳು ಆಶಾಕಿರಣವಾಗಿವೆ ಎನ್ನುತ್ತಾರೆ ಬೇವಿನಹಳ್ಳಿ ಗ್ರಾಮದ ಪೋಷಕ ಗಾಳೆಪ್ಪ.