ಕನ್ನಡಪ್ರಭ ವಾರ್ತೆ ಬೇಲೂರು ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಲ್ಲಿರುವ ವ್ಯವಹಾರಿಕ ಜಾಣ್ಮೆಯನ್ನು ಗುರುತಿಸಲು ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದು ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೇಳಿದರು.
ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಅನಂತ ಸ್ವಾಮಿ ಮಾತನಾಡಿ, ಮಕ್ಕಳ ಸಂತೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ವ್ಯವಹಾರದ ಜ್ಞಾನವನ್ನು ಹೊಂದಿರುತ್ತಾರೆ. ಪಟ್ಟಣದ ವಿದ್ಯಾರ್ಥಿಗಳಿಗೆ ಆ ವ್ಯವಹಾರಿಕ ಜ್ಞಾನ ಇರುವುದಿಲ್ಲ. ಆದ್ದರಿಂದ ಪ್ರತಿ ೨ ವರ್ಷಗಳಿಗೊಮ್ಮೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾದರೆ ಸಾಲದು, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿದಾಗ ವ್ಯವಹಾರಿಕ ಜ್ಞಾನ ಹೆಚ್ಚಾಗುತ್ತದೆ. ಹಾಗೂ ಸಾಂಸ್ಕೃತಿಕ ಚಟುವಟಿಕೆ ಜೊತೆಯಲ್ಲಿ ಸಾರ್ವಜನಿಕರ ಜೊತೆ ಬೆರೆತು ಕಲಿಯಲು ಸಹಕಾರಿಯಾಗುತ್ತದೆ ಎಂದರು.
ಶಿಕ್ಷಕಿ ವೀಣಾಶಾರದ ಮಾತನಾಡಿ, ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸುಗಳು, ತರಕಾರಿಗಳು ಹಾಗೂ ಇತರ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ನಾವು ಶಿಕ್ಷಕರೆನ್ನದೆ ಗ್ರಾಹಕರಾಗಿ ಪಾಲ್ಗೊಂಡಿದ್ದೇವೆ ಎಂದರು.ಮನೆಯಿಂದ ಪೋಷಕರ ಬಳಿ ಮಕ್ಕಳು ಬೋಂಡಾ, ವಡೆ, ಚಕ್ಕುಲಿ, ನಿಪ್ಪಟ್ಟಿನಂತಹ ವಿವಿಧ ತಿಂಡಿ ತಿನಿಸು ಮಾಡಿಸಿಕೊಂಡು ಆಗಮಿಸಿದ್ದರು. ಕೋಸು, ಬದನೆ, ತೆಂಗಿನಕಾಯಿ, ಪಪ್ಪಾಯಿ, ಕೊತ್ತಂಬರಿ, ವಿವಿಧ ತರಕಾರಿ, ಸೊಪ್ಪುಗಳನ್ನು ತಂದಿದ್ದರು. ಎಲ್ಲವನ್ನು ಅಚ್ಚುಕಟ್ಟಾಗಿ ಒಂದೆಡೆ ಜೋಡಿಸಿ ವ್ಯಾಪಾರಕ್ಕೆ ಇಳಿದರು. ವ್ಯಾಪಾರಿಗಳನ್ನು ಮೀರಿಸುವಂತೆ ಕೂಗಿ ತಮ್ಮದೇ ಆದ ಶೈಲಿಯಲ್ಲಿ ವ್ಯಾಪಾರ ಮಾಡಿದರು.
ಗ್ರಾಹಕ ಪೋಷಕ, ಗ್ರಾಮಸ್ಥರೊಂದಿಗೆ ಚೌಕಾಸಿ ವ್ಯಾಪಾರಕ್ಕೆ ಇಳಿದು ವ್ಯಾಪಾರ ಕೌಶಲ್ಯ ಮೆರೆದರು. ತೂಕದ ಯಂತ್ರದಲ್ಲಿ ಕರಾರುವಕ್ಕಾಗಿ ಮಾರಾಟ ವಸ್ತುಗಳನ್ನು ತೂಗಿದರು. ಒಂದಕ್ಕೆ ಒಂದು ಉಚಿತ ಎಂದು ಹಲವರು ಗಿರಾಕಿ ಸೆಳೆಯಲು ವ್ಯಾಪಾರಿ ತಂತ್ರವನ್ನು ಬಳಸಿದರು. ಮನೆಯಿಂದಲೇ ಬಟ್ಟೆ ಬ್ಯಾಗ್ ತರಬೇಕು ಎನ್ನುವುದು ತಿಳಿಸಿದರಲ್ಲದೆ, ಪ್ಲಾಸ್ಟಿಕ್ ಬಳಕೆ ಹಾನಿಕಾರಕದ ಬಗ್ಗೆ ತಿಳಿಸಿದರು.