ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವಶ್ಯವಿರುವ ಆರ್ಥಿಕ ಜ್ಞಾನ ಮತ್ತು ಗ್ರಾಮೀಣ ಭಾಗದ ಜನರ ಬದುಕಿನ ಜೀವನ ಹೇಗಿರುತ್ತೆ ಎಂಬುದನ್ನ ತೋರಿಸಿಕೊಡುವಂತಹ ಒಂದು ಉತ್ತಮ ಕಾರ್ಯಕ್ರಮ ಮಕ್ಕಳ ಸಂತೆ ಎಂದು ರಚನಾ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಎಚ್. ಟಿ. ಪ್ರಕಾಶ್ ಹೇಳಿದರು.ತಾಲೂಕಿನ ಶ್ರವಣಬೆಳಗೊಳದ ರಚನಾ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಹಾಗೂ ಆಹಾರಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ ಪ್ರಾಪಂಚಿಕ ಜ್ಞಾನವನ್ನು ತಿಳಿಸುವಂತಹ ಉದ್ದೇಶ ಇದಾಗಿದೆ. ಮಕ್ಕಳಲ್ಲಿ ಆರ್ಥಿಕ ಜ್ಞಾನಮಟ್ಟವನ್ನು ಮತ್ತು ಗ್ರಾಮೀಣ ಭಾಗದ ಜನರ ಜೀವನ ಹೇಗಿರುತ್ತದೆ ಎಂಬುದನ್ನು ಮಕ್ಕಳ ಸಂತೆ ಮತ್ತು ಆಹಾರ ಮೇಳದಲ್ಲಿ ಅವರು ಪ್ರತ್ಯಕ್ಷವಾಗಿ ನೋಡುವ ಮೂಲಕ ಅದನ್ನು ತಿಳಿಯುವಂತಹ ಒಂದು ಉತ್ತಮ ವೇದಿಕೆ ಇದಾಗಿದೆ ಎಂದರು. ಬಳಿಕ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಸುನಿತಾ ಪ್ರಕಾಶ್, ಪ್ರಾಥಮಿಕ ಹಂತದಲ್ಲೆ ವಿದ್ಯಾರ್ಥಿಗಳ ವ್ಯವಹಾರ ಜ್ಞಾನವನ್ನು ಗುರುತಿಸಲು ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿಯಾಗಿದೆ. ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ವ್ಯವಹಾರ ಜ್ಞಾನ ಹೆಚ್ಚುತ್ತದೆ ಎಂದು ತಿಳಿಸಿದರು.ಇನ್ನು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ ಪ್ರಾರ್ಥನಾ ಮಾತನಾಡಿ, ಇವತ್ತು ರೈತರು ಸಂಕಷ್ಟದಲ್ಲಿದ್ದಾರೆ, ಕೃಷಿ ಚಟುವಟಿಕೆ ಮಾಡುವ ಸಂದರ್ಭದಲ್ಲಿ ಸರಿಯಾದ ಮಳೆ, ಬೆಳೆ ಬರುವುದಿಲ್ಲ. ಇನ್ನು ಕಷ್ಟಪಟ್ಟು ಬೆಳೆ ಬಂದಾಗ ಮಳೆ ಬಂದು ಎಲ್ಲವೂ ಕೂಡ ನೀರು ಪಾಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತ ತಾನು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗದೇ ಸಂಕಷ್ಟಕ್ಕೆ ಒಳಗಾಗಿದ್ದಾನೆ. ತಾನು ಕೃಷಿಗೆ ಹಾಕಿದ ಬಂಡವಾಳದ ಒಂದಿಷ್ಟಾದರೂ ಬಂದರೆ ಸಾಕು ಎನ್ನುವ ದೃಷ್ಟಿಯಲ್ಲಿ ಸಂತೆ ವ್ಯಾಪಾರದಲ್ಲಿ ಗ್ರಾಹಕರು ಕಡಿಮೆ ಕೇಳಿದರೂ ಕೊಟ್ಟು ಸುಮ್ಮನಾಗಿಬಿಡುತ್ತಾನೆ. ಇದು ಇವತ್ತಿನ ಮಕ್ಕಳ ಸಂತೆಯಲ್ಲಿಯೂ ಗ್ರಾಹಕರು ನಮ್ಮ ವಸ್ತುವನ್ನು ಮೂಲ ಬೆಲೆಗಿಂತ ಅರ್ಧ ಬೆಲೆಗೆ ಕೊಡಿ ಎಂದು ಕೇಳಿದಾಗ ರೈತರ ಬದುಕು ಏನೆಂಬುದು ತಿಳಿಯಿತ್ತು ಎಂದರು. ಉದ್ಘಾಟನೆಯ ಬಳಿಕ, ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸು, ವಿವಿಧ ಬಗೆಯ ತರಕಾರಿಗಳು, ಹಣ್ಣು ಹಂಪಲು, ಪಾನಿಪುರಿ, ಸಲಾಡ್, ಚಹಾ ಬಿಸ್ಕತ್ತು ಸೇರಿದಂತೆ ಇತರ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಪಾಲಕರು ಮಕ್ಕಳು ತಯಾರಿಸಿದ ಪದಾರ್ಥಗಳ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತರಕಾರಿ, ತಂಪು ಪಾನೀಯ, ಪಾನಿಪುರಿ, ಬೇಲ್ ಪುರಿ, ಸೊಪ್ಪು ಮತ್ತಿತರೆ ಪದಾರ್ಥಗಳನ್ನು ಪಾಲಕರು ಮಕ್ಕಳಿಂದ ಖರೀದಿಸಿ ಪಾಲಕರು ಮಕ್ಕಳ ವ್ಯವಹಾರ ಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮಕ್ಕಳ ಸಂತೆ ಎಂದರೆ ಶಾಲೆಗಳಲ್ಲಿ ಅಥವಾ ಸಮುದಾಯಗಳಲ್ಲಿ ಆಯೋಜಿಸಲಾಗುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಮಕ್ಕಳು ಸ್ವತಃ ವ್ಯಾಪಾರಿಗಳಾಗಿ ಹಣ್ಣುಹಂಪಲು, ತಿನಿಸುಗಳು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ವ್ಯವಹಾರಿಕ ಜ್ಞಾನ ಲೆಕ್ಕಾಚಾರ ಗ್ರಾಹಕರೊಂದಿಗೆ ವ್ಯವಹರಿಸುವ ಕೌಶಲ್ಯವನ್ನು ಈ ಕಾರ್ಯಕ್ರಮದಲ್ಲಿ ಕಲಿಯುತ್ತಾರೆ. ಸ್ವಾವಲಂಬನೆಯ ಪಾಠಗಳನ್ನು ಕಲಿಯುವುದರ ಜೊತೆಗೆ ಮಕ್ಕಳಲ್ಲಿ ಸೃಜನಶೀಲತೆ ಆರ್ಥಿಕ ಸಾಕ್ಷರತೆ ಮತ್ತು ಆತ್ಮವಿಶ್ವಾಸವನ್ನು ನೀಡುವ ಮಕ್ಕಳ ಸಂತೆ ಕೇವಲ ಒಂದು ವಿನೋದದ ಕಾರ್ಯಕ್ರಮವಲ್ಲ, ಬದಲಿಗೆ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾದ ಒಂದು ಶೈಕ್ಷಣಿಕ ಮತ್ತು ಸಾಮಾಜಿಕ ವೇದಿಕೆ ಎಂದರೆ ತಪ್ಪಾಗದು.ಕಾರ್ಯಕ್ರಮವನ್ನು ಶಾಲೆಯ ಮುಂಭಾಗ ಟೇಪ್ ಕತ್ತರಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರು ಚಾಲನೆ ನೀಡಿದರು. ಇದೇ ವೇಳೆ, ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕರಾದ ಸೋಮಶೇಖರ್, ಶಶಿಕುಮಾರ್, ಸಂದೇಶ, ಶೃತಿ, ಸುವರ್ಣ, ಪ್ರೀತಿ, ರಕ್ಷಿತಾ, ಗಂಗಾ ಸೇರಿದಂತೆ ಹಾಜರಿದ್ದರು.